
ಹಾಸನ : ತಾಲ್ಲೂಕು ಕಸಬಾ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ಸರ್ವೆ ನಂಬರ್ ೩೫ ರಲ್ಲಿ ಸರ್ಕಾರದಿಂದ ಮಂಜೂರಾಗಿರುವ, ರೈತರು ಸ್ವಾಧೀನದಲ್ಲಿರುವ ಬಗರ್‌ಹುಕಂ ಸಾಗುವಳಿ ಭೂಮಿಯನ್ನು ಕೆಐಡಿಬಿಯವರು ಬಲವಂತವಾಗಿ ಭೂಸ್ವಾಧಿನ ಮಾಡುತ್ತಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಕೆ.ಪಿ.ಆರ್.ಎಸ್. ನೇತೃತ್ವದಲ್ಲಿ ಪ್ರತಿಭಟಿಸಿ ಡಿಸಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.
ನಂತರ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್ ಮಾತನಾಡಿ, ಹಾಸನ ತಾಲ್ಲೂಕು ಕಸಬಾ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ಸರ್ವೆ ನಂಬರ್ ೩೫ ರಲ್ಲಿ ೨೬ ರೈತ ಕುಟುಂಬಗಳಿಗೆ ತಲಾ ೦.೨೬ ಎಕ್ಕರೆಯಂತೆ ಕೃಷಿ ಭೂಮಿಯನ್ನು ೧೯೭೭ ರಲ್ಲಿ ಬಗರ್ ಹುಕುಂ ಸಾಗುವಳಿಯ ಅಧಾರದಲ್ಲಿ ಮಂಜೂರು ಮಾಡಿ, ಹಂಗಾಮಿ ಸಾಗುವಳಿ ಚೀಟಿಯನ್ನು ಹಾಸನ ತಹಸಿಲ್ದಾರ್ ರವರ ಕಛೇರಿಯಿಂದ ನೀಡಿರುತ್ತಾರೆ.
ಅಲ್ಲಿಂದ ಇಲ್ಲಿಯವರೆಗೂ ನಿರಂತರವಾಗಿ ಈ ಎಲ್ಲಾ ಕುಟುಂಬಗಳು ಈ ಭೂಮಿಯನ್ನು ಸಾಗುವಳಿ ಮಾಡಿ ಬೆಳೆ ಬೆಳೆದು ಸ್ವಾಧೀನಾನುಭವದಲ್ಲಿರುತ್ತಾರೆ. ಪಹಣಿಗಳಲ್ಲೂ ಇವರುಗಳ ಹೆಸರುಗಳು ಬರುತ್ತಿವೆ. (ಆದರೆ ಇದುವರೆಗೂ ಈ ಭೂಮಿ ಪೋಡ್ ಆಗಿಲ್ಲ) ಎಂದರು. ೧೯೯೭ ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹಾಸನದ ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ರೈತರು ಸ್ವಾಧೀನದಲ್ಲಿರುವ ಭೂಮಿಯಲ್ಲಿ ಸ್ವಲ್ಪ ಭಾಗವನ್ನು ಸ್ವಾಧೀನ ಪಡಿಸಿಕೊಂಡು ಪರಿಹಾರವನ್ನು ನೀಡಿದ್ದಾರೆ.
ಆದರೆ ೨೬ ಕುಟುಂಬಗಳಿಗೆ ಮಂಜೂರಾಗಿದ್ದ ತಲಾ ೦.೨೬ ಎಕ್ಕರೆ ಜಾಗದಲ್ಲಿ ಕೆಐಡಿಬಿಯವರು ಭೂಸ್ವಾದೀನ ಮಾಡಿಕೊಂಡು ಉಳಿದಿರುವ ಭೂಮಿಯಲ್ಲಿ ರೈತರು ಈಗಲೂ ಅನುಭವದಲ್ಲಿದ್ದು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಈ ಮಧ್ಯೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಉಳಿಕೆ ಭೂಮಿಯನ್ನೂ ತಮಗೆ ಸೇರಬೇಕೆಂದು ರೈತರಿಗೆ ದೌರ್ಜನ್ಯ ನಡೆಸಿ ಭೂಮಿ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ನಡೆಸಲು ಮುಂದಾಗಿದ್ದು ಇದನ್ನು ರೈತರು ಪ್ರತಿಭಟಿಸಿ ತಡೆದಿದ್ದರೆ ಎಂದು ಹೇಳಿದರು.
ರೈತರು ಈಗಲೂ ಅನುಭವದಲ್ಲಿದ್ದು, ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ಈ ಉಳಿಕೆ ಭೂಮಿಯನ್ನು ಸರ್ವೆ ಮಾಡಿ, ಗಡಿಗಳನ್ನು ಗುರುತಿಸಿ, ಅದ್ದುಬಸ್ತ್ ಮೂಲಕ ಪೋಡಿ ಮಾಡಿಕೊಡಬೇಕು ಮತ್ತು ಅನಗತ್ಯವಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ರೈತರಿಗೆ ತೊಂದರೆ ಕೊಡದಂತೆ ಸೂಚಿಸಬೇಕೆಂದು ತಮ್ಮಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಸನ ಜಿಲ್ಲಾ ಸಮಿತಿ ಮನವಿ ಮಾಡಿಕೊಳ್ಳುತ್ತದೆ ಎಂದರು.
ಏನಾದರೂ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೇ ಮುಂದೆ ರೈತರ ಜೊತೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕೆ.ಪಿ.ಆರ್.ಎಸ್. ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ವಸಂತಕುಮಾರ್, ಜಯಲಕ್ಷ್ಮಿ, ಮೂರ್ತಿ, ಅರವಿಂದ್, ರಾಜೇಶ್, ಜಯಮ್ಮ, ಪ್ರಕಾಶ್, ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


