
ಹಾಸನ: ಕೊಲ್ಕತ್ತಾದ ಆರ್.ಜಿ.ಕರ್ ವೈದ್ಯೆ ಮೇಲಿನ ಅಮಾನುಷ ದೌರ್ಜನ್ಯ ಹಾಗೂ ಕೊಲೆಯನ್ನು ಖಂಡಿಸಿ ಎ.ಐ.ಡಿ.ಎಸ್.ಓ. ನೇತೃತ್ವದಲ್ಲಿ ನಗರದ ಹೇಮಾವತಿ ಪ್ರತಿಮೆ ಮುಂಬಾಗ ಪ್ರತಿಭಟಿಸಿದಲ್ಲದೇ ರಾಜ್ಯದಲ್ಲಿ ಒಂದು ಹೊಸ ಸಾಂಸ್ಕೃತಿಕ ಚಳುವಳಿಗೆ ನಾಂದಿ ಹಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎ.ಐ.ಡಿ.ಎಸ್.ಓ. ವಿದ್ಯಾರ್ಥಿ ಸಂಘಟನೆಯ ಸಹಾಸಂಚಾಲಕಿ ಚೈತ್ರ ಮಾತನಾಡಿ, ಕಳೆದ ತಿಂಗಳು ಆಂಧ್ರಪ್ರದೇಶದಲ್ಲಿ, ೧೨-೧೩ ವರ್ಷದ ೩ ಜನ ಶಾಲಾ ಮಕ್ಕಳು ೩ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಅವಳನ್ನು ಕೊಂದರು.
ಮುಂಬೈನಲ್ಲಿ ಕೂಡ ಇದೇ ವಯಸ್ಸಿನ ಬಾಲಕಿಯ ಮೇಲೆ ಬಾಲಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಕಲ್ಕತ್ತಾದ ವೈದ್ಯಕೀಯ ಕಾಲೇಜೊಂದರಲ್ಲಿ ಕಾಮುಕನಿಗೆ ಬಲಿಯಾಗಿ ಘೋರ ಸಾವಿಗೀಡಾದ ವೈದ್ಯೆ ಈ ಪ್ರಕರಣಗಳಿಗೆ ಇನ್ನೊಂದು ಸೇರ್ಪಡೆ!! ನಾಗರೀಕ ಸಮಾಜವು ತಲೆತಗ್ಗಿಸುವಂತೆ ಮಾಡಿರುವ ಈ ಅತ್ಯಾಚಾರದ ಮಾರಿಯು ತೀವ್ರವಾಗಿ ಎಲ್ಲೆಡೆ ಹಬ್ಬುತ್ತಿದೆ.
ಈ ಮಾರಿಯ ಮೂಲ ಅಡಗಿರುವುದು ಇಂದಿನ ಸಾಂಸ್ಕೃತಿಕ ಅಧಃಪತನದಲ್ಲಿ ಎಂದರು.
ಕಲ್ಕತ್ತಾದ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆಯ ವಿರುದ್ದ ಈಗಾಗಲೇ ಜನರು ಬೀದಿಗಿಳಿದಿದ್ದಾರೆ.
ಈ ಘಟನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ದಿಕ್ಕು ತಪ್ಪಿಸುವ ಹೀನ ಪ್ರಯತ್ನವನ್ನು ಆಡಳಿತಾರೂಢ ಟಿಎಂಸಿ ಸೇರಿದಂತೆ ಪಟ್ಟಭದ್ರರು ನಡೆಸುತ್ತಿದ್ದಾರೆ.
ಆದರೆ ಸರಿಯಾದ ದಾರಿಯಲ್ಲಿ ಮುನ್ನಡೆದು ಸಂಘಟಿತ ಹೋರಾಟವನ್ನು ಬೆಳೆಸುವುದರಿಂದ ಮಾತ್ರ ಪರಿಹಾರ ಸಾಧ್ಯ. ಇಂದು ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿರುವ ಅಶ್ಲೀಲ ಸಿನಿಮಾ, ಸಾಹಿತ್ಯ ಮತ್ತು ಪೋರ್ನ್ ವೆಬ್ ಸೈಟ್ ಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿ ಸಾಂಸ್ಕೃತಿಕ ಅಧಃಪತನಕ್ಕೆ ಕಾರಣವಾಗಿವೆ.
ಸಾಂಸ್ಕೃತಿಕ ಅಧಃಪತನದ ಮಹಾಮಾರಿಯ ವಿರುದ್ಧ ಸಮರ ಸಾರಿ ನೇತಾಜಿ-ಭಗತ್ ಸಿಂಗರಂತಹ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳು ಹಾಗೂ ನವೋದಯದ ಹರಿಕಾರರ ಉನ್ನತ ಚಿಂತನೆಗಳನ್ನು ಎಲ್ಲೆಡೆ ಸಾರುವ ಐತಿಹಾಸಿಕ ಜವಾಬ್ದಾರಿಯು ವಿದ್ಯಾರ್ಥಿ ಸಮೂಹದ ಮೇಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಒಂದು ಹೊಸ ಸಾಂಸ್ಕೃತಿಕ ಚಳುವಳಿಗೆ ನಾಂದಿ ಹಾಡಬೇಕೆಂದು ರಾಜ್ಯದ ವೈದ್ಯಕೀಯ, ಇಂಜನಿಯರಿಂಗ್, ಪದವಿ ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಹಾಗೂ ಪ್ರಜ್ಞಾವಂತ ಜನತೆಗೆ ಎಐಡಿಎಸ್‌ಓ ಕರೆ ನೀಡುತ್ತದೆ ಎಂದರು.
ಪ್ರತಿಭಟನೆಯಲ್ಲಿ ಎ.ಐ.ಡಿ.ಎಸ್.ಓ. ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಪುರುಷೋತ್ತಮ್, ಧನುಶ್ರೀ, ಮಮತಾ, ಗಾಯಿತ್ರಿ, ಚೇತನ ಜೊತೆಗೆ ಪ್ರಜ್ವಲ್, ಮದನ್,ಪೂಜಾ, ತರುಣ್ , ದೀಪಿಕಾ, ಉಷಾ, ಸುಷ್ಮಾ ಶ್ಯಾಮಲಾ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
