ಹಾಸನ: ೭ನೇ ವೇತನ ಆಯೋಗದ ಅನುಷ್ಠಾನದಲ್ಲಿ ದಿನಾಂಕ: ೦೧.೦೭.೨೦೨೨ ರಿಂದ ೩೧.೦೭.೨೦೨೪ ಅವಧಿಯಲ್ಲಿ ನಿವೃತ್ತರಾದ ಅಧಿಕಾರಿ/ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯವನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ಡಿಸಿ ಕಛೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಹರೀಶ್ ಕಟ್ಟೆಬೆಳಗುಳಿ ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರದ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ದಿನಾಂಕ:೦೧.೦೭.೨೦೨೨ ರಿಂದ ೩೧.೦೭.೨೦೨೪ರವರೆಗೆ (೨೫ ತಿಂಗಳ ಅವಧಿಯಲ್ಲಿ) ನಿವೃತ್ತರಾಗಿರುವ ರಾಜ್ಯದ ಸಮಸ್ತ ಅಧಿಕಾರಿ/ನೌಕರರು ವಿನಂತಿಸುಕೊಳ್ಳುವುದೇನೆಂದರೆ, ತಾವುಗಳು ಎಲ್ಲಾ ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ಸರ್ಕಾರಿ ನೌಕರರಿಗೆ ಸರ್ಕಾರವು ಪರಿಷ್ಕೃತ ೭ನೇ ವೇತನವನ್ನು ಅನುಷ್ಠಾನಕ್ಕೆ ತಂದಿರುತ್ತೀರಿ ಇದಕ್ಕಾಗಿ ತಮಗೆ ನಮ್ಮೆಲ್ಲರ ಹೃದಯಪೂರ್ವಕ ಅಭಿನಂದನೆಗಳು.

ಸರ್ಕಾರದ ಆದೇಶದ ವೇತನ ಶ್ರೇಣಿಗಳ ಪರಿಷ್ಕರಣೆಯ ಕಾರಣದಿಂದಾಗಿ ಉಂಟಾಗುವ ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು ದಿನಾಂಕ: ೦೧.೦೮.೨೦೨೪ ರಿಂದ ನಗದಾಗಿ ಪಾವತಿ ಮಾಡತಕ್ಕದ್ದು, ದಿನಾಂಕ: ೦೧.೦೭.೨೦೨೨ ರಿಂದ ೩೧.೦೭.೨೦೨೪ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ ಸರ್ಕಾರಿ ಪ್ರಕರಣಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಗಳಿಗಾಗಿ ಪರಿಗಣಿಸತಕ್ಕದ್ದು.

ಆದರೆ ಈ ಕಾಲ್ಪನಿಕ ಪುನರ್ ನಿಗದಿಯ ಆರ್ಥಿಕ ಲಾಭವು ನಿವೃತ್ತಿ ಹೊಂದಿದ ಸರ್ಕಾರಿ ನೌಕರನಿಗೆ ಅಥವಾ ಮರಣ ಹೊಂದಿದ ಸರ್ಕಾರಿ ನೌಕರನ ಫಲಾನುಭವಿಗೆ ಸಂದರ್ಭಾನುಸಾರ ದಿನಾಂಕ: ೦೧.೦೮.೨೦೨೪ ರಿಂದ ಪ್ರಾಪ್ತವಾಗತಕ್ಕದ್ದು ಎಂದರು.

ಈ ಆದೇಶದನ್ವಯ ದಿನಾಂಕ: ೦೧-೦೭-೨೦೨೨ ರಿಂದ ೩೧-೦೭-೨೦೨೪ರವರೆಗೆ (೨೫ ತಿಂಗಳ ಅವಧಿಯಲ್ಲಿ) ನಿವೃತ್ತರಾದ/ನಿಧನ ಹೊಂದಿದ ಅಧಿಕಾರಿ/ನೌಕರರಿಗೆ ಪರಿಷ್ಕೃತ ವೇತನದನ್ವಯ ಲೆಕ್ಕಾಚಾರ ಮಾಡದೆ ಹಳೆಯ ವೇತನ ಶ್ರೇಣಿಯ ಮೇಲೆಯೇ ಪರಿಗಣಿಸುತ್ತಿರುವುದು, ನಿವೃತ್ತಿ ಜೀವನ ಸಂಧ್ಯಾಕಾಲದಲ್ಲಿರುವ ನಮ್ಮಗಳಿಗೆ ಅತೀವ ಅಘಾತವಾಗಿರುತ್ತದೆ. ನಮ್ಮದಲ್ಲದ ಕಾರಣದಿಂದ ಆಗಸ್ಟ್ ೨೦೨೪ ರಿಂದ ನಿವೃತ್ತಿ ಹೊಂದುವ ಅಧಿಕಾರಿ/ನೌಕರರು ಪರಿಷ್ಕೃತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯವು ಲಭ್ಯವಾಗುತ್ತಿದ್ದು, ಅವರಂತೆ ನಾವುಗಳೂ ಸಹ ೭ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯಗಳನ್ನು ಪಡೆಯುವ ಅರ್ಹತೆ ಹೊಂದಿದ್ದೇವೆ ಎಂದು ಹೇಳಿದರು.

ಪ್ರಸ್ತುತ ಸೇವೆಯಲ್ಲಿರುವ ಇತರ ಅಧಿಕಾರಿ/ ನೌಕರರಂತೆ ನಾವು ಕೂಡ ದಿನಾಂಕ : ೦೧-೦೭-೨೦೨೨ ರಿಂದಲೇ ಪಡೆಯಬೇಕಿದ್ದ ನಿವೃತ್ತಿ ವೇತನದ ವ್ಯತ್ಯಾಸ ಬಾಕಿಯನ್ನು ಕೇಳುತ್ತಿರುವುದಿಲ್ಲ. ನಾವು ಕೇಳುತ್ತಿರುವುದು ೭ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಲೆಕ್ಕಾಚಾರದ ವ್ಯತ್ಯಾಸ ಮಾತ್ರ. ಆದ್ದರಿಂದ ನಮಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ಅರ್ಥ ಮಾಡಿಕೊಂಡು ದಯಮಾಡಿ ಮೇಲಿನ ಅವಧಿಯಲ್ಲಿ ಲೆಕ್ಕಾಚಾರ ಮಾಡಿ ನ್ಯಾಯಯೋಜಿತವಾಗಿ ಲಭ್ಯವಾಗುವ ಆರ್ಥಿಕ ಸೌಲಭ್ಯವನ್ನು ದೊರಕಿಸಿ ಕೊಡಲು ತಮ್ಮಲ್ಲಿ ಈ ನಾಡಿನ ಸಮಸ್ತ ನಿವೃತ್ತ ನೌಕರರು ಈ ಮೂಲಕ ತಮ್ಮಲ್ಲಿ ಅತ್ಯಂತ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಇದೆ ವೇಳೆ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕ ಅಶೋಕ್ ಎಂ. ಸಜ್ಜನ್, ಗೋಪಾಲ್, ಕುಮಾರ್, ಲಿಂಗಮೂರ್ತಿ, ಸದಾಶಿವ, ಪುಟ್ಟಸ್ವಾಮಿ, ರಾಜ್ಯ ಮಹಾ ಪ್ರಧಾನ ಸಂಚಾಲಕ ಎಂ.ಪಿ.ಎಂ. ಷಣ್ಮುಖಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *