
ಹಾಸನ: ಕಾಂಗ್ರೆಸ್ ಸರಕಾರವು ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಆರೋಗ್ಯ ಇಲಾಖೆಯ ಎನ್.ಹೆಚ್.ಎಂ. ಒಳ ಗುತ್ತಿಗೆದಾರರ ನೌಕರರನ್ನು ಖಾಯಂ ಮಾಡುವಂತೆ ಸರಕಾರದ ಗಮನ ಸೆಳೆಯಲು ಹಿಮ್ಸ್ ನಲ್ಲಿ ಕೆಲಸ ಮಾಡುವ ನೌಕರರು ಹಾಗೂ ಇತರರು ಕಪ್ಪುಪಟ್ಟಿ ಧರಿಸಿ ಕೆಲ ಸಮಯ ಕೆಲಸದಿಂದ ಹೊರ ಉಳಿದು ಆಸ್ಪತ್ರೆ ಮುಂದೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಳಗುತ್ತಿಗೆ ನೌಕರರ ಸಂಘದಿಂದ ಶಾಂತಿಯುತ ಹೋರಟ ನಡೆಸಿ ನಂತರ ಕೆಲಸಕ್ಕೆ ಹಾಜರಾದರು.
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಳಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಕೆ. ರಾಘವೇಂದ್ರ ಮಾಧ್ಯಮದೊಂದಿಗೆ ಮಾತನಾಡಿ, ರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ೨೮,೨೫೮ ನೌಕರರು ಎನ್‌ಎಚ್‌ಎಂ ಯೋಜನೆ ಅಡಿಯಲ್ಲಿ ಒಳಗುತ್ತಿಗೆ ನೌಕರರಾಗಿ ಕಳೆದ ೨೦ ವರ್ಷದಿಂದಲೂ ಸೇವೆ ಸಲ್ಲಿಸುತ್ತಿದ್ದು, ನಮ್ಮ ಸೇವೆಯನ್ನು ಗುರುತಿಸಿ ಕಾಂಗ್ರೆಸ್ ಪಕ್ಷವು ವಿಧಾನಸೌದ ಚುನಾವಣೆ ಪ್ರಣಾಳಿಕೆಯಲ್ಲಿ ಎನ್‌ಎಚ್‌ಎಮ್ ಒಳಗುತ್ತಿಗೆ ನೌಕರರನ್ನು ಖಾಯಂ ಮಾಡುತ್ತೇವೆ ಎಂದು ಘೋಷಿಸಿರುತ್ತಾರೆ. ಆದರಿಂದ ಸನ್ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಮನವಿಮಾಡಲಾಗಿದ್ದು ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಸಹ ಮನವಿಮಾಡಲಾಗಿದೆ ಎಂದರು.
ಸರ್ಕಾರ ಘೋಷಿಸಿದಂತೆ ನಮ್ಮನ್ನು ಖಾಯಂ ಮಾಡಬೇಕೆಂಬುದು ನಮ್ಮ ಬಹುದಿನಗಳ ಬೇಡಿಕೆಯಾಗಿದೆ. ನಮ್ಮ ಬೇಡಿಕೆ ಈಡೇರಿಕೆಗಾಗಿ ಮಾನ್ಯ ಆರೋಗ್ಯ ಸಚಿವರು ಸಭೆ ನಡೆಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೌಕರರ ಖಾಯಂಗೆ ಕಡತ ಸಿದ್ಧಪಡಿಸಲು ಸೂಚಿಸಿರುತ್ತಾರೆ.
ಅದರಂತೆ ಖಾಯಂ ಕಡತವು ರಚನೆಯಾಗಿ ಇಲಾಖೆಯ ಹಂತದಲ್ಲಿದೆ. ನುಡಿದಂತೆ ನಡೆಯುತ್ತಿರುವ ಘನ ಸರ್ಕಾರವು ಸಚಿವ ಸಂಪುಟದಲ್ಲಿ ಉನ್ನತ ಮಟ್ಟದ ನಿರ್ಣಯ ತೆಗೆದುಕೊಳ್ಳಬೇಕಾಗಿರುವುದರಿಂದ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯಾದ್ಯಂತ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಎನ್.ಹೆಚ್.ಎಂ. ಒಳಗುತ್ತಿಗೆ ನೌಕರರು ತಮ್ಮ ತಮ್ಮ ಕೆಲಸ ನಿರ್ವಹಿಸುವ ಸ್ಥಳದಲ್ಲಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಸಾಂಕೇತಿಕವಾಗಿ ಶಾಂತಯುತ ಹೋರಾಟ ಕೈಗೊಂಡು ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಳಗುತ್ತಿಗೆ ನೌಕರರ ಸಂಘದ ಮಂಜುರಾಜು, ಡಾ|| ನಾಹೀದ್, ಡಾ|| ಹೇಮಂತ್, ಮಂಗಳ, ಡಾ|| ಮಂಜುನಾಥ್, ದಿವ್ಯ ಇತರರು ಇದೆ ವೇಳೆ ಉಪಸ್ಥಿತರಿದ್ದರು.
