ಇತ್ತೀಚಿಗೆ ಪರಿಸರ ವಿಜ್ಞಾನಿ ಮಾಧವ್ ಗಾಡ್ಗಿಲ್ ರ ಕುರಿತು ಕನ್ನಡದ ಲೇಖಕ ಜಗದೀಶ್ ಕೊಪ್ಪರವರು ಬರೆದ ’ಪರಿಸರ ಲೋಕದ ಅಶಾಂತ ಸಂತ’ ಎಂಬ ಲೇಖನ ಫೇಸ್ಬುಕ್ ವಾಟ್ಸಾಪ್ ಆದಿಯಾಗಿ ಅನೇಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಲ್ಪಟ್ಟಿತ್ತು.

ಪರಿಸರ ಆಸಕ್ತರಿಗೆ ಮಾಧವ್ ಗಾಡ್ಗಿಲ್‌ರದ್ದು ಚಿರಪರಿಚಿತ ಹೆಸರೇ ಆದರೂ ಅವರ ಹೆಸರು ಯಾವತ್ತೂ ಭರ್ತಿ ಮಳೆಯ ದಿನಗಳಲ್ಲಿ ಮುನ್ನಲೆಗೆ ಬರುತ್ತಿರುತ್ತದೆ. ಇದಕ್ಕೆ ಕಾರಣ 2011ರಲ್ಲಿ ಅವರ ನೇತೃತ್ವದಲ್ಲಿ ಬಿಡುಗಡೆಯಾದ ಪಶ್ಚಿಮಘಟ್ಟದ ಸಂರಕ್ಷಣೆಯ ಕುರಿತಾದ ಸಮಗ್ರ ವರದಿ ಮತ್ತು ಅದರಲ್ಲಿ ಅವರು ಕೊಟ್ಟ ಎಚ್ಚರಿಕೆಗಳು!

ಅವರ ವೈಜ್ಞಾನಿಕ ವರದಿಯ ಅನುಗುಣವಾಗಿಯೇ ಅವರು ಹೇಳಿದ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ಒಂದೊಂದಾಗಿ ಭೂಕುಸಿತ, ನೆರೆಹಾವಳಿಯಂತಹ ಅವಘಡಗಳು ಸಂಭವಿಸುತ್ತಿವೆ.ಅದು 2009-10ರ ಇಸವಿ; ಭಾರತದ ಪರಿಸರ ಸಂರಕ್ಷಣೆಯ ಕುರಿತು ಸ್ವಲ್ಪವಾದರೂ ಆಶಾದಾಯಕವಾಗಿದ್ದ ದಿನಗಳು ಅವು.

ಜೈರಾಮ್ ರಮೇಶ್ ನೇತೃತ್ವದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅನೇಕ ಪರಿಸರ ಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿತ್ತು. ಅವುಗಳಲ್ಲಿ ಒಂದು ಪಶ್ಚಿಮಘಟ್ಟಗಳ ಶಾಶ್ವತವಾದ ಸಂರಕ್ಷಣೆಗೆ ನೇಮಿಸಿದ ಮಾಧವ್ ಗಾಡ್ಗಿಲ್‌ರ ನೇತೃತ್ವದ ತಜ್ಞ ಸಮಿತಿ ಕೂಡ ಒಂದು.

ಈ ಸಮಿತಿಯಲ್ಲಿ ನಮ್ಮ ಕನ್ನಡದ ಲೇಖಕ ಮತ್ತು ವಿಜ್ಞಾನಿ ಶ್ರೀ ಕೆ.ಎನ್ ಗಣೇಶಯ್ಯನವರೂ ಇದ್ದರು. ಈ ಸಮಿತಿಯ ಸದಸ್ಯರೆಲ್ಲರೂ ಪಶ್ಚಿಮಘಟ್ಟದ ಕುರಿತು ಆಳವಾದ ಜ್ಞಾನ ಹೊಂದಿದವರೇ ಆಗಿದ್ದರು. ಅವರು ತಮ್ಮ ಅನುಭವ ಮತ್ತು ಸ್ಥಳ ಪರಿಶೀಲನೆಯ ಪ್ರಕಾರ ಅಲ್ಲಿನ ಪರಿಸರ ಸೂಕ್ಷ್ಮತೆಯ ಆಧಾರದ ಮೇಲೆ ಪಶ್ಚಿಮಘಟ್ಟದ ಪ್ರದೇಶಗಳನ್ನು ಮೂರು ವಿಭಾಗಗಳಾಗಿ ಗುರುತಿಸಿ ಆಯಾ ಪ್ರದೇಶದಲ್ಲಿ ಕೈಗೊಳ್ಳಬಹುದಾದ ಮತ್ತು ನಿಷೇಧಿತ ಚಟುವಟಿಕೆಗಳನ್ನು ಶಿಫಾರಸ್ಸು ಮಾಡಿದ್ದರು.

ಈ ವರದಿ ಹೊರಬರುವುದೇ ತಡ, ಇದರ ಕುರಿತು ಕೇರಳದಲ್ಲಿ ವ್ಯಾಪಕವಾದ ವಿರೋಧ ಉಂಟಾಯಿತು. ತದನಂತರ ಇದು ತೀವ್ರವಾದ ರಾಜಕೀಯ ಸ್ವರೂಪವನ್ನು ಪಡೆದು ಕೇರಳದಾದ್ಯಂತ ಮುಖ್ಯವಾಗಿ ಅಲ್ಲಿನ ವಿರೋಧ ಪಕ್ಷ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್‌ನ ನೇತೃತ್ವದಲ್ಲಿ ಹರತಾಳ, ಪ್ರತಿಭಟನೆ ಮತ್ತು ವ್ಯಾಪಕ ಹಿಂಸಾಚಾರಗಳು ನಡೆದವು.

ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಲಾಯಿತು, ಕ್ಯಾಲಿಕಟ್ ಅರಣ್ಯ ಇಲಾಖೆಯ ಕಚೇರಿಯನ್ನು ಸುಡಲಾಯಿತು, ಇದನ್ನು ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು ಎಂಬುದು ಪ್ರತಿಭಟನೆಯ ತೀವ್ರತೆ ಮತ್ತು ಜನರ ದಿಕ್ಕುತಪ್ಪಿಸುವ ಊಹಾಪೋಹಗಳ ಪ್ರಭಾವ ಎಷ್ಟಿತ್ತು ಎಂಬುದು ತಿಳಿಯುತ್ತದೆ.

ಕೇರಳದ ಪಶ್ಚಿಮಘಟ್ಟದ ಬಹುಭಾಗ ವಯನಾಡು ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಬರುತ್ತದೆ. ಇಡುಕ್ಕಿ ಜಿಲ್ಲೆಯ ಬಹುಪಾಲು ಜನ ಕ್ರಿಶ್ಚಿಯನ್ನರು, ಹಾಗಾಗಿ ಅಲ್ಲಿನ ಕ್ಯಾಥೊಲಿಕ್ ಚರ್ಚು ಜಿಲ್ಲೆಯ ಸಾಮಾಜಿಕ ಜೀವನ ಮತ್ತು ರಾಜಕೀಯದ ಮೇಲೆ ಭದ್ರ ಹಿಡಿತವನ್ನು ಹೊಂದಿದೆ.

ಈ ಭಾಗದ ಅತಿದೊಡ್ಡ ಚರ್ಚು ಈ ವರದಿಯ ಕುರಿತು ಕಟುವಾಗಿ ವಿರೋಧ ವ್ಯಕ್ತಪಡಿಸಿತು ಮತ್ತು ಜನರಿಗೆ ತಪ್ಪು ಮಾಹಿತಿ ಹರಡಲು ಕೂಡ ಕಾರಣವಾಯಿತು. ಹಾಗೆ ನೋಡಿದರೆ ಈ ವರದಿಯು ಪಶ್ಚಿಮ ಘಟ್ಟದ ದೀರ್ಘಕಾಲದ ಸಂರಕ್ಷಣೆಯನ್ನು ಪ್ರತಿಪಾದಿಸುತ್ತಿತ್ತು ಮತ್ತು ಜನರನ್ನು ಮತ್ತು ಗ್ರಾಮ ಪಂಚಾಯಿತಿಯಂತಹ ಸ್ಥಳೀಯ ಸಂಸ್ಥೆಗಳನ್ನು ಪ್ರಮುಖ ಪಾಲದಾರರನ್ನಾಗಿ ಪರಿಗಣಿಸಲು ಶಿಫಾರಸ್ಸು ಮಾಡಿತ್ತು.

ಯಾವುದೇ ಕೈಗಾರಿಕೆ ಅಥವಾ ಪಾರಿಸರಿಕ ನಿರ್ಧಾರ ಕೈಗೊಳ್ಳುವ ಮುನ್ನ ಜನರ ಅಭಿಪ್ರಾಯಕ್ಕೆ ಹೆಚ್ಚಿನ ಒತ್ತನ್ನು ನೀಡಿತ್ತು; ನಿಜ ಅರ್ಥದಲ್ಲಿ ಇದು ಆಡಳಿದ ವಿಕೇಂದ್ರೀಕರಣವನ್ನು ಪ್ರತಿಪಾದಿಸುವ ಒಂದು ಜನಪರ ನಿಲುವೇ ಆಗಿತ್ತು. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜನರಿಗೆ ತಪ್ಪು ಮಾಹಿತಿ ನೀಡಿ- ಈ ವರದಿ ಜಾರಿಯಾದರೆ ಜನರನ್ನು ಒಕ್ಕಲೆಬ್ಬಿಸುತ್ತಾರೆ, ಜನರಿಗೆ ಯಾವುದೇ ಉದ್ಯಮ ವ್ಯವಹಾರ ಮಾಡಲು ಸ್ವಾತಂತ್ರ್ಯವಿರುವುದಿಲ್ಲ ಎಂದು ಜನರನ್ನು ಈ ವರದಿಯ ವಿರುದ್ಧ ಎತ್ತಿ ಕಟ್ಟಿದವು.

ಈ ವರದಿಯನ್ನು ವಿರೋಧಿಸುವ ಭರದಲ್ಲಿ ಕ್ಯಾಥೊಲಿಕ್ ಚರ್ಚಿನ ಒಕ್ಕೂಟ, ಈ ವರದಿಯ ಹಿಂದೆ ವಿದೇಶಿ ಕೈವಾಡ ಇದೆ, ಜನರನ್ನು ಒಕ್ಕಲೆಬ್ಬಿಸಿ, ಅವರ ಭೂಮಿಯನ್ನು ಲಪಟಾಯಿಸುವ ಯೋಜನೆ ಇದೆ ಎಂಬ ಸತ್ಯಕ್ಕೆ ದೂರವಾದ ಹೇಳಿಕೆಯನ್ನು ನೀಡಿತು. ಅಲ್ಲಿನ ಸ್ಥಳೀಯ ಶಾಸಕ, ಈ ವರದಿಯನ್ನು ಅನುಷ್ಠಾನಗೊಳಿಸಲು ಯಾರಾದರೂ ಬಂದರೆ ಅವರನ್ನು ಥಳಿಸಲಾಗುವುದು ಎಂಬ ಹೇಳಿಕೆಯನ್ನೂ ನೀಡಿದರು.

ಈ ವರದಿಯು ಕಲ್ಲು, ಮರಳು ಮತ್ತಿತರ ಗಣಿಗಾರಿಕೆ, ದೊಡ್ಡ ಅಣೆಕಟ್ಟು, ಉಷ್ಣ ವಿದ್ಯುತ್ ಸ್ಥಾವರ ಮತ್ತು ಮಾಲಿನ್ಯಕಾರಕ ಉದ್ಯಮಗಳನ್ನು ಸ್ಥಾಪಿಸದಂತೆ ಮತ್ತು 2000 ಚದುರಮೀಟರಿಗೂ ದೊಡ್ಡ ಕಟ್ಟಡಗಳನ್ನು ಕಟ್ಟುವುದನ್ನು ಮಾತ್ರ ನಿಷೇಧಿಸಲು ಶಿಫಾರಸ್ಸು ಮಾಡಿತ್ತು. ಹಾಗಾಗಿ ಈ ವರದಿಯನ್ನು ವಿರೋಧದ ಹಿಂದೆ ಯಾರಿದ್ದರು ಎಂಬುದನ್ನು ಸುಲಭವಾಗಿ ಊಹಿಸಬಹುದು.ಈ ವರದಿ ಮೊದಲು ಬಿಡುಗಡೆಯಾದಾಗ ಕರ್ನಾಟಕವೂ ಸೇರಿದಂತೆ ಪಶ್ಚಿಮಘಟ್ಟವನ್ನು ಒಳಗೊಂಡ ಇತರ ರಾಜ್ಯಗಳು ಭಾರೀ ವಿರೋಧವನ್ನೇನೂ ವ್ಯಕ್ತಪಡಿಸಿರಲಿಲ್ಲ.

ಆದರೆ ಕೇರಳದ ತೀವ್ರ ಪ್ರತಿಭಟನೆಯನ್ನು ನೋಡಿ peer pressureನಿಂದೇನೋ ಎಂಬಂತೆ ತಾವೂ ವಿರೋಧ ವ್ಯಕ್ತಪಡಿಸಿದವು. ತದನಂತರ ಆಗಿನ ಯುಪಿಎ ಸರ್ಕಾರ ಕಸ್ತೂರಿ ರಂಗನ್ ನೇತೃತ್ವದ ಇನ್ನೊಂದು ಸಮಿತಿಯನ್ನು ನೇಮಿಸಿ ಗಾಡ್ಗಿಲ್ ವರದಿಯನ್ನು ಮರುಪರಿಶೀಲಿಸುವಂತೆ ಆದೇಶಿಸಿತು. ಕಸ್ತೂರಿರಂಗನ್ ವರದಿಯು ಪರಿಸರ ಸೂಕ್ಷ್ಮ ವಲಯವನ್ನು ಗ್ರಾಮಮಟ್ಟಕ್ಕೆ ಮಿತಗೊಳಿಸಿ ಪಶ್ಚಿಮಘಟ್ಟದ 37% ಪ್ರದೇಶವನ್ನು ಸಂರಕ್ಷಣೆಗೆ ಒಳಪಡಿಸಲು ಶಿಫಾರಸ್ಸು ನೀಡಿತು. ಆದರೆ ಈ ವರದಿಗೂ ಕೂಡ ಎಲ್ಲ ರಾಜ್ಯಗಳು ವಿರೋಧ ವ್ಯಕ್ತಪಡಿಸಿದವು.

ಇವೆಲ್ಲವುದರ ನಡುವೆ ಪಶ್ಚಿಮಘಟ್ಟಗಳನ್ನು ಶಾಶ್ವತವಾಗಿ ಉಳಿಸಬೇಕು ಎಂಬ ಆಶಯಕ್ಕೆ ಮಾತ್ರ ಹಿನ್ನಡೆ ಉಂಟಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *