
ಹಾಸನ : ಸುಣ್ಣ ಮತ್ತು ಮೈಲುತುತ್ತವನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ತಯಾರಿಸುವ ದ್ರಾವಣಕ್ಕೆ ಬೋರ್ಡೋ ದ್ರಾವಣ ಎಂದು ಹೆಸರು. ಇದು ಕೊಳೆಯುವ ರೋಗಕ್ಕೆ ಕಾರಣವಾದ ಶಿಲೀಂದ್ರದ ಬೀಜಾಣುಗಳನ್ನು ಮೊಳಕೆಯೊಡೆಯದಂತೆ ಪ್ರತಿಬಂಧಿಸುವ ಶಕ್ತಿಯನ್ನು ಹೊಂದಿದೆ.
ಫ್ರಾನ್ಸ್ ದೇಶದ ಬೋರ್ಡೋ ಎಂಬ ಪ್ರದೇಶದಲ್ಲಿ ದ್ರಾಕ್ಷಿ ತೋಟಗಳಲ್ಲಿ ಸಸ್ಯಾಣುಗಳಿಂದ ಉಂಟಾಗುವ ರೋಗವನ್ನು ನಿಯಂತ್ರಿಸಲು ಈ ಸಾಮಗ್ರಿಗಳ ಪಾಕವನ್ನು ಬಳಸಲಾಗುತ್ತಿತಂತೆ. ೩೦ ರಿಂದ ೪೦ ದಿನಗಳ ಕಾಲ ಅಂಟಿಕೊಂಡು ತನ್ನ ಪರಿಮಾಣವನ್ನು ಉಳಿಸಿಕೊಂಡು ಇರುವ ಶಿಲೀಂದ್ರನಾಶಕ ಇಂದಿಗೂ ಇದೊಂದೇ. ಬರೇ ಅಡಿಕೆ ಮಾತ್ರವಲ್ಲದೆ ಬೇರೆ ಬೆಳೆಗೆ ಇದರ ಬಳಕೆ ಇದೆ.ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕಾರೇಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್.ಸಿ(ಅನಾರ್ಸ) ಕೃಷಿ ಮತ್ತು ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ ೨೦೨೪-೨೫ ರ ಅಂಗವಾಗಿ ಬೋರ್ಡೋ ದ್ರಾವಣ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ರೈತರಿಗೆ ಬೋರ್ಡೋ ದ್ರಾವಣವನ್ನು ಹೇಗೆ ತಯಾರಿಸಬೇಕೆಂದು ತಿಳಿಸಿಕೊಟ್ಟರು.ಮೊದಲಿಗೆ ಒಂದು ಕಿಲೋಗ್ರಾಂ ಮೈಲುತುತ್ತವನ್ನು ಐವತ್ತು ಲೀಟರ್ ನೀರಿನಲ್ಲಿ ಕರಗಿಸಬೇಕು. ಅದೇ ರೀತಿ ಇನ್ನೊಂದು ಪಾತ್ರೆಯಲ್ಲಿ ಒಂದು ಕಿಲೋ ಗ್ರಾಂ ಸುಣ್ಣವನ್ನು ಐವತ್ತು ಲೀಟರ್ ನೀರಿನಲ್ಲಿ ಕರಗಿಸಬೇಕು.ಮತ್ತು ಮೈಲುತುತ್ತದ ಮಿಶ್ರಣ ಮತ್ತು ಸುಣ್ಣದ ತಿಳಿ ನೀರನ್ನು ಮೂರನೇ ಪಾತ್ರೆಯಲ್ಲಿ ಒಂದೇ ಸಮಯಕ್ಕೆ ಸುರಿಯಬೇಕು.
ನಂತರ ಅದು ಶೇಕಡಾ ಒಂದರಷ್ಟು ಬೋರ್ಡೋ ಮಿಶ್ರಣ ತಯಾರಿಕೆ ಆಗುತ್ತದೆ. ಅದು ಒಟ್ಟು 100 ಲೀಟರ್ ಆಗಿರುತ್ತದೆ.ನಂತರ ಈ ಮಿಶ್ರಣವು ನಮಗೆ ಸರಿಯಾಗಿ ಆಗಿದೆಯೋ ಅಥವಾ ಇಲ್ಲವೇ ಎಂಬುದನ್ನು ಗಮನಿಸಿಕೊಳ್ಳಬೇಕು ಹೇಗೆಂದರೆ! ಒಂದು ಬ್ಲೇಡ್ ಅಥವಾ ಒಂದು ಸ್ವಚ್ಛವಾದ ಚಾಕುವನ್ನು ತೆಗೆದುಕೊಳ್ಳಿ ಅದನ್ನು ಆ ಮಿಶ್ರಣದಲ್ಲಿ ಮೊಳಗಿಸಿ ಅದು ಕೆಂಪು ಬಣ್ಣ ಕಂಡುಬಂದರೆ. ಅದಕ್ಕೆ ಇನ್ನಷ್ಟು ಸುಣ್ಣ ವನ್ನು ಹಾಕಿರಿ,ಅಥವಾ ಅದು ತಿಳಿನೀಲಿ ಬಣ್ಣದ ಆಗಿದ್ದರೆ, ಅದು ಬೋರ್ಡೋ ಮಿಶ್ರಣ ಸರಿಯಾಗಿದೆ ಎಂದರ್ಥ. ಇದಕ್ಕೆ ಪ್ಲಾಸ್ಟಿಕ್ ಪಾತ್ರೆಗಳನ್ನು ಉಪಯೋಗಿಸುವುದು ಒಳ್ಳೆಯದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ಎಚ್.ಮಂಜುನಾಥ (ಸಸ್ಯರೋಗಶಾಸ್ತ್ರ ವಿಭಾಗ), ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.
