
ಹಾಸನದ ಕಾರೆಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್.ಸಿ (ಅನರ್ಸ್) ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2024-25 ಅಂಗವಾಗಿ ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ “ಅಜೋಲಾ : ಹಸಿರು ಬಂಗಾರ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಪ್ರಮುಖ ಉಪಕಸುಬುಗಳಲ್ಲಿ ಒಂದಾದ ಅಜೋಲಾ ಕೃಷಿಯನ್ನು ಗ್ರಾಮಸ್ಥರಿಗೆ ಪದ್ಧತಿ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು.
ಇದನ್ನು ಭತ್ತದ ಗದ್ದೆಯಲ್ಲಿ, ಕೃಷಿ ಹೊಂಡ ಹಾಗೂ ನೀರು ನಿಲ್ಲುವ ಸ್ಥಳಗಳಲ್ಲಿ ಬೆಳೆಸಬಹುದು. ಅಜೋಲಾ ಬೆಳೆಸಲು 10 ಅಡಿ ಉದ್ದ, 5 ಅಡಿ ಅಗಲ, 1 ಅಡಿ ಆಳದ ಗುಂಡಿ ತೆಗೆಯಬೇಕು. ಇದನ್ನು ಚಪ್ಪರ ಅಥವಾ ಶೇಡ್ ನೆಟ್ ಕೆಳಗೆ ಬೆಳೆಸಬೇಕು. ಗುಂಡಿಗೆ ಪಾಲಿಥೀನ್ ಶೀಟ್ ಹರಡಬೇಕು ನಂತರ 10ಕೆಜಿ ಸೋಸಿದ ಕೆಂಪು ಮಣ್ಣನ್ನು ಸಮನಾಗಿ ಹರಡಿ, 20 ಲೀಟರ್ ನೀರಿಗೆ 5ಕೆಜಿ ಸಗಣಿಯನ್ನು ಮಿಶ್ರಣ ಮಾಡಿ ಗುಂಡಿಗೆ ಸೇರಿಸಬೇಕು.1/2ಕೆಜಿ ತಾಯಿ ಅಜೋಲಾವನ್ನು ನೀರಿನ ಮೇಲೆ ಸಮನಾಗಿ ಹರಡಬೇಕು. ಒಂದು ಮುಷ್ಟಿ ಅಷ್ಟು ಖನಿಜ ಮಿಶ್ರಣವನ್ನು ಸೇರಿಸಬೇಕು. 10 ದಿನಗಳ ನಂತರ ಗುಂಡಿಯ ತುಂಬಾ ಅಜೋಲಾ ಬೆಳೆದಿರುತ್ತದೆ. ದಿನಕ್ಕೆ 1-1.5 ಕೆಜಿ ಇಳುವರಿ ಪಡೆಯಬಹುದು.
ಇದನ್ನು ಹಸುಗಳಿಗೆ ಮೇವಾಗಿ ಬಳಸಿದರೆ ಹಾಲಿನ ಪ್ರಮಾಣ ಹಾಗೂ ಕೊಬ್ಬಿನಂಶ ಹೆಚ್ಚಾಗುತ್ತದೆ. ಈ ಕಾರ್ಯಕ್ರಮದಲ್ಲಿ ಡಾ. ಸದಾಶಿವನ ಗೌಡ (ಬೇಸಾಯಶಾಸ್ತ್ರ ವಿಭಾಗ) , ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.
