
ಸಕಲೇಶಪುರ :ಕಲಾ ಪ್ರಿಯ ಮಂಜು ಅವರಿಗೆ ಕಲೆಯ ನಂಟು ನಾಲ್ಕು ದಶಕದ್ದು. ಸಕಲೇಶಪುದಲ್ಲಿ ಕಲಾಪ್ರಿಯ ಆರ್ಟ್ ಮೂಲಕ ಪರಿಚಿತ. ಹತ್ತಿರದವರಿಗೆ ಪೈಂಟರ್ ಮಂಜು.
1988 ಬೆಳ್ಳೇಕೆರೆಯಲ್ಲಿ ಮತ್ತು ನಂತರ ಸಕಲೇಶಪುರದಲ್ಲಿ ರಂಗ ಶಿಬಿರಗಳ ಪರ್ವ ಪ್ರಾರಂಭವಾಯಿತು.
ಆಗ ಶಿಬಿರದ ನಿರ್ದೇಶಕರಾಗಿ ಬಂದವರು ಮಂಡ್ಯ ರಮೇಶ್ ಮತ್ತು ಕೃಷ್ಣ ಕುಮಾರ್ ನಾರ್ಣಕಜೆ.ಆಗಷ್ಟೇ ಕಲಾವಿದನೆಂದು ಗಾಯಕನೆಂದು ಗುರುತಿಸಿಕೊಳ್ಳುತ್ತಿದ್ದ ಕಲಾಪ್ರಿಯ ಮಂಜು ಈ ಶಿಬರದಲ್ಲಿ ಭಾಗವಹಿಸಿದರುಆಗ ಸಕಲೇಶಪುರದ ಜನರಿಗೆ ಪೈಂಟರ್ ಮಂಜು ಎಂದು ಮಾತ್ರ ಪರಿಚಿತನಾಗಿದ್ದ ಈ ಯುವಕ ಎಂತಹ ಒಳ್ಳೆಯ ನಟ, ಗಾಯಕ ಕೂಡಾ ಎಂದು ತಿಳಿಯಿತು.ಮಂಜುವಿನ ಎನರ್ಜಿ ನೋಡಿ ನಿರ್ದೇಶಕರೂ ದಂಗಾಗಿದ್ದರು. ನಂತರ ದ ದಿನಗಳಲ್ಲಿ ಮಂಜು ದ್ರುವರಾಜ ದೇಶಪಾಂಡೆ ,, ಪ್ರಸಾದ್ ರಕ್ಷಿದಿ, ಹುಲುಗಪ್ಪ ಕಟ್ಡೀಮನಿ ಮುಂತಾದವರ ನಿರ್ದೇಶನದ ನಾಟಕಗಳಲ್ಲಿ ನಟಿಸಿದರು. ಹಿನ್ನೆಲೆ ಸಂಗೀತ ನೀಡಿದರು. ರಂಗಸಜ್ಜಿಕೆ ಮಾಡಿದರು.
ಮೂರುವರೆ ದಶಕದಿಂದ ಜೈ ಕರ್ನಾಟಕ ಸಂಘ ಬೆಳ್ಳೆಕಕೆರೆಯ ಹೆಚ್ಚು ಎಲ್ಲಾ ನಾಟಕಗಳಿಗೆ ಮಂಜು ಅವರದೇ ಸಂಗೀತ. ಮತ್ತು ಗಾಯನ.ಈ ನಡುವೆ ಸದ್ದು ಗದ್ದಲಗಳಿಲ್ಲದೆ ಮಂಜು ಸಾಗಿದ ದಾರಿ ಬೆಳೆದ ಪರಿ ಅದ್ಭುತ.
ಸಾಕ್ಷರತಾ ಆಂದೋಲನದಲ್ಲಿಯೂ ಮಂಜು ಅವರದು ಗಣನೀಯ ಕೊಡುಗೆ.. ಹಲವು ಜಾಥಾಗಳಲ್ಲಿ ಭಾಗಿ
ಮಂಜು ಶಾಲೆಯಲ್ಲಿ ಕಲಿತದ್ದು ಕಡಿಮೆ.. ತಂದೆ ತಾಯಿಯರದು ಒಪ್ಪೊತ್ತಿನ ಕೂಳಿನ ದುಡಿಮೆ. ಒಂಬತ್ತು ಮಕ್ಕಳಲ್ಲಿ ಮಂಜು ಕೊನೆಯವ.
ಒಂದೆಡೆ ಮಂಜುವಿನ ಕಲಾಪ್ರಿಯ ಆರ್ಟ್ಸ್ ಸಕಲೇಶಪುರ ದಲ್ಲಿ ಹೆಸರು ಮಾಡುತ್ತಿದ್ದರೆ.ಮಂಜು ಅವರದು ನಿರಂತರ ಹೋರಾಟದ ಬದುಕು.ಜನಪರ ಹೋರಾಟಗಳಲ್ಲಿ ತೊಡಗಿಕೊಂಡ ಮಂಜು ದಲಿತ ಕಲಾ ಮಂಡಳಿಯ ರಾಜ್ಯಾಧ್ಯಕ್ಷನಾಗಿ ಬೆಳೆದಿದ್ದರು.
ಮಂಜುವಿನ ಕಲಾ ಮಂಡಲಿಯ ಬಗ್ಗೆ ಲಂಕೇಶ್ ಮೆಚ್ಚಿ ಲೇಖನ ಬರೆದಿದ್ದರು.ಹಾಡುತ್ತಲೇ ಬೆಳೆದ ಮಂಜು ಗದ್ದಾರ್ ಜೊತೆಯಲ್ಲಿ ಹಾಡಿದ. ದೇಶ ಸುತ್ತಿದ.ಅಂದಿನ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಮಾಯಾವತಿ ಅವರಿಂದ ಸನ್ಮಾನಿತನಾದರು
ಎಲ್ಲಿ ಹೋದರೂ ರಕ್ಷಿದಿಯ ಕೆಮ್ಮಣ್ಣಿಗೆ ಅಂಟಿಕೊಂಡೇ ಇದ್ದ ಮಂಜು. ಇಷ್ಟೂ ವರ್ಷಗಳಲ್ಲಿ ಎಲ್ಲಾ ನಾಟಕಗಳಲ್ಲಿ ಹಾಡಿದರು. ಹಲವು ನಾಟಕಗಳಲ್ಲಿ ನಟಿಸಿದರು.
1992 ರಲ್ಲಿ ನಮ್ಮ ತಂಡ ಕರ್ನಾಟಕ ನಾಟಕ ಅಕಾಡೆಮಿಯ ಗ್ರಾಮೀಣ ರಂಗೋತ್ಸವದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿತು. ಆಗ ಅದರ ಹಿಂದೆ ಮಂಜುವಿನ ಹಾಡುಗಾರಿಕೆ ಇತ್ತುಆ ನಾಟಕಕೋತ್ಸವದಲ್ಲಿ ಮಂಜು ಅತ್ಯುತ್ತಮ ಗಾಯಕನೆಂದು ಸನ್ಮಾನಿತನಾದರು
ಮಂಜು ಇದು ಯಾವುದಕ್ಕೂ ತಲೆಕೆಡಿಸಿ ಕೊಂಡವರೇ ಅಲ್ಲ. ಕಲಾ ಯಾತ್ರೆ ಹಾಗೇ ಮುಂದುವರಿಯಿತು.
ಮುಂದಿನ ದಿನಗಳಲ್ಲಿ ಮಂಜು ಮಕ್ಕಳ ವಿದ್ಯೆಯ ದೃಷ್ಟಿಯಿಂದ ಮೈಸೂರು ಸೇರಿದರು. ಅದು ಸರಿಯಾದ ನಿರ್ಧಾರ ವಾಗಿತ್ತು.
ಮಂಜುವಿಗೆ ಹಲವು ಅವಕಾಶಗಳು ತೆರೆದುಕೊಂಡವು. ಹಾಯ್ ಬೆಂಗಳೂರ್ , ಪ್ರಜಾಮತ, ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕಲಾತ್ಮಕ ಬರಹಗಳ ಅವಕಾಶ ದೊರೆಯಿತು, ನೂರಾರು ಸಿನಿಮಾ ಮತ್ತು ಟಿವಿ ಧಾರಾವಾಹಿಗಳಿಗೆ ಹಾಗೂ ಮೈಸೂರು ದಸರಾ ಸೇರಿದಂತೆ ಹಲವಾರು ಉತ್ಸವಗಳಿಗೆ ಮಂಜು ಕಲಾವಿದರಾಗಿ ಕೆಲಸಮಾಡಿದ್ದಾರೆ. ಮಾಡುತ್ತಿದ್ದಾರೆ
ಈ ನಡುವೆ ಒಬ್ಬರು ಕಲಾವಿದರೆನಿಸಿಕೊಂಡವರು ಮಂಜುವಿನ ಬರಹಗಳ ಶೈಲಿ ( ಫಾಂಟ್) ಬಳಸಿಕೊಂಡು ಹೆಸರಾದರು…
ಮಂಜು ತಲೆ ಕೆಡಿಸಿಕೊಳ್ಳಲಿಲ್ಲ ತನ್ನ ಬರಹದ ಶೈಲಿಯನ್ನೇ ಬದಲಾಯಿಸಿಕೊಂಡರು.ಮೈಸೂರಿನಲ್ಲಿ ಮಂಜು ರಂಗಾಯಣದ ಮಕ್ಕಳ ನಾಟಕಗಳಿಗೂ ಹಾಡಿದರು
ಹಾನುಬಾಳಿನಲ್ಲಿ ಸಕಲೇಶಪುರ ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನ ಮಾಡಿದಾಗ.. ಸಮ್ಮೇಳನದ ವೇದಿಕೆ ಮತ್ತು ಇತರ ಎಲ್ಲಾ ದ್ವಾರಾಲಂಕಾರಗಳು ಮಂಜುವಿನ ಕೈ ಚಳಕದಲ್ಲಿ ಮೆರೆದವು.ಅದೇ ವೇದಿಕೆಯಲ್ಲಿ ಮಂಜು ಸನ್ಮಾನಿತನಾಗಿದ್ದರು
ಮಂಜು ನಾಲ್ಕು ದಶಕಗಳಲ್ಲಿ ಗಾಯಕನಾಗಿ, ನಟನಾಗಿ, ಜನಪರ ಹೋರಾಟಗಾರನಾಗಿ. ಕಲಾವಿದನಾಗಿ ರಾಜ್ಯಾದ್ಯಂತ ಪರಿಚಿತರು. ಹಲವು ವೇದಿಕೆ ಗಳಲ್ಲಿ ಸನ್ಮಾನಿತರು.
ಇಂದು ಮಂಜುವಿಗೆ ಜಿಲ್ಲಾಡಳಿತದ ವತಿಯಿಂದ ನಡೆಯುವ ರಾಜ್ಯೋತ್ಸವದಲ್ಲಿ ಸನ್ಮಾನಿಸುತ್ತಿರುವುದು ಅರ್ಥಪೂರ್ಣವಾಗಿದ್ದು ಮುಂದೆ ರಾಜ್ಯ ಪ್ರಶಸ್ತಿಗೆ ಅಯ್ಕೆಯಾಗಲಿ ಎಂದು ಹಾರೈಸೋಣ.
ಕೃಪೆ ಪ್ರಸಾದ್ ರಕ್ಷಿದಿ,ಫೇಸ್ ಬುಕ್‌ನಿಂದ
