
ಕರ್ನಾಟಕ : ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಮಂಜುನಾಥ ಗೌಡ ಕಂಡು ಕೇಳರಿಯದ ಅಂತರದ ಗೆಲುವು ದಾಖಲಿಸಿ ಗೆದ್ದು ಬೀಗಿದ್ದಾರೆ.
ರಾಜ್ಯ ಯುವ ಕಾಂಗ್ರೆಸ್ನ ನೂತನ ಅಧ್ಯಕ್ಷರ ಚುನಾವಣೆಯಲ್ಲಿ ಮಂಜುನಾಥ ಗೌಡ 2,77,000 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.. ಹಣಾಹಣಿಯಲ್ಲಿ ಮಂಜುನಾಥ್ 5,67,000 ಮತಗಳನ್ನ ಪಡೆದರೆ ಅವರ ಪ್ರತಿಸ್ಪರ್ಧಿ ದೀಪಿಕಾ ರೆಡ್ಡಿ ಅವರಿಗೆ 2,90,000 ಮತಗಳು ದೊರೆತಿವೆ. ಅಧ್ಯಕ್ಷ ಸ್ಥಾನದ ಚುನಾವಣೆ ಅಖಾಡದಲ್ಲಿ ಬರೋಬ್ಬರಿ 13 ಮಂದಿ ಇದ್ದರು.
NSUI ವಿದ್ಯಾರ್ಥಿ ಸಂಘಟನೆಯಿಂದ ರಾಜಕೀಯಕ್ಕೆ ಎಂಟ್ರಿಯಾದವರು ಮಂಜುನಾಥ್, ಕಾಂಗ್ರೆಸ್ನ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ರು. ಇದಕ್ಕೂ ಮುನ್ನ ಎರಡು ಬಾರಿ NSUY ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿ ಅನುಭವ ಪಡೆದಿದ್ದರು.
ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಮತ್ತು ಕಾರ್ಯಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಮಂಜುನಾಥ್ ಗೌಡ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಎಲ್ಲರಿಂದ ಸೈ ಎನಿಸಿಕೊಂಡಿದ್ರು. ಅಂದ್ಹಾಗೆ ಮಂಜುನಾಥ್ ಗೌಡ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು ಡಿಸಿಎಂ ಡಿಕೆಶಿಯವರ ಬಲಗೈ ಭಂಟ ಎಂದೇ ಕರೆಯಿಸಿಕೊಂಡಿದ್ದಾರೆ.
ಮಂಜುನಾಥ್ ಗೌಡ ಜತೆಗೆ ರಾಜ್ಯ ರಾಜಕಾರಣಕ್ಕೆ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಕೂಡ ಎಂಟ್ರಿ ಪಡೆದಿದ್ದಾರೆ. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಗೆಲುವು ದಾಖಲಿಸಿ, 1.80 ಲಕ್ಷ ಮತ ಪಡೆದು ಗೆದ್ದು ಬೀಗಿದ್ದಾರೆ..
ಆಗಸ್ಟ್ 20ರಿಂದ ಸೆಪ್ಟೆಂಬರ್ 22ರ ವರೆಗೆ ನಡೆದಿದ್ದ ಯೂಥ್ ಕಾಂಗ್ರೆಸ್ ಚುನಾವಣೆಗೆ ರಾಜ್ಯಾದ್ಯಂತ ಮತದಾನ ನಡೆದಿತ್ತು. ಅದರ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಯುವ ಕಾಂಗ್ರೆಸ್ ಸಾರಥ್ಯ ಪಡೆದಿರುವ ಮಂಜುನಾಥ್ ತಂಡಕ್ಕೆ ಸಾಕಷ್ಟು ಸವಾಲುಗಳಿವೆ..
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುವ ಮತದಾರರನ್ನ ಸೆಳೆಯುವ ಕೆಲಸ, ಗ್ಯಾರಂಟಿ ಯೋಜನೆಗಳ ಪ್ರಚಾರ, ಯುವ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ವಿಚಾರಗಳನ್ನ ಪ್ರಚಾರ ನಡೆಸಬೇಕಿದೆ.
ಯುವ ಕಾಂಗ್ರೆಸ್ಗೆ ಹೊಸ ಚೈತನ್ಯ ನೀಡುವಲ್ಲಿ, ಯುವ ಕಾಂಗ್ರೆಸ್ ಪದಾಧಿಕಾರಿಗಳ ಮಂಜುನಾಥ್ ತಂಡ ಯಾವ ರೀತಿ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಲಿದೆ ಅನ್ನೋದು ಕಾದು ನೋಡಬೇಕಿದೆ..!