
ಅರೇಹಳ್ಳಿ: ಬೇಲೂರು ತಾಲೂಕು ಬಿಕ್ಕೋಡು ಹೋಬಳಿಯ ಟಿ.ಬೊಮ್ಮಡಿಹಳ್ಳಿ ಗ್ರಾಮದಲ್ಲಿ 25ನೇ ವರ್ಷದ ಶನೈಶ್ಚರ ಸ್ವಾಮಿ ಹಾಗೂ ಚಾಮುಂಡೇಶ್ವರಿಯ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನಡೆಯಿತು. ಪ್ರಧಾನ ಅರ್ಚಕ ನಾಗರಾಜು ಸ್ವಾಮಿಯವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಪೂಜಾ ಕಾರ್ಯಕ್ರಮ ಜರುಗಿತು.
ಸ್ವಾಮಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಕುಣಿಸಲಾಯಿತು. ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಭಕ್ತಿ ಭಾವದಿಂದ ಕೆಂಡೋತ್ಸವದಲ್ಲಿ ಪಾಲ್ಗೊಂಡರು. ಈ ಪೂಜೋತ್ಸವವನ್ನು ಉದ್ದೇಶಿಸಿ ಸರಕಾರಿ ನೌಕರ ರಂಗಸ್ವಾಮಿ ಮಾತನಾಡಿ, ಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥಗಳು ನೆರವೇರುತ್ತದೆ. ನಾನಿಂದು ಸರಕಾರಿ ನೌಕರನಾಗಿ ಸೇವೆ ಸಲ್ಲಿಸಲು ಈ ದೇವರ ಅನುಗ್ರಹವೆ ಕಾರಣ ಎಂದರು.
ಶಿಕ್ಷಕ ಗಂಗರಾಜು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅರೇಹಳ್ಳಿ, ಬಿಕ್ಕೋಡು ಒಳಗೊಂಡಂತೆ ನಾನಾ ಹಳ್ಳಿಗಳಿಂದ ಭಕ್ತರು ಆಗಮಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಸ್ವಾಮಿಯ ಕೃಪೆ ಯಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ನುಡಿದರು.
ಅರ್ಚಕ ನಾಗರಾಜು ಸ್ವಾಮಿ ಮಾತನಾಡಿ, ಸ್ವಾಮಿಯ ಆಶೀರ್ವಾದದಿಂದ ದೇಗುಲವನ್ನು ಇಷ್ಟು ಅಚ್ಚುಕಟ್ಟಾಗಿ ನಿರ್ಮಿಸಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಭಕ್ತರ ಸಹಕಾರ ಅತಿ ಮುಖ್ಯವಾಗಿ ಬೇಕಾಗಿದೆ ಎಂದರು.
ಈ ವೇಳೆ ಗ್ರಾಮಸ್ಥರು , ಸುತ್ತ ಮುತ್ತಲ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.
