ಬೇಲೂರು : ತಾಲೂಕು ಅರೇಹಳ್ಳಿ ಹೋಬಳಿ ಹಿರಿಗರ್ಜೆ ಗ್ರಾಮದಲ್ಲಿ ಮೂರು ದಿವಸಗಳ ಕಾಲ ಶ್ರೀ ಕ್ಷೇತ್ರ ಆದಿಶಕ್ತಿ ಕೆರೆಕೋಡಮ್ಮನವರ ಜಾತ್ರಾ ಮಹೋತ್ಸವ ಜರುಗಿತು.

ನಾಮ ಸಂವತ್ಸರದ ಉತ್ತರಾಯಣೆ ವಸಂತ ಋತು ಚೈತ್ರ ಮಾಸ ಕೃಷ್ಣ ಪಕ್ಷದ ಶುಭ ದಿನದಂದು ಆರಂಭವಾದ ಪೂಜಾ ಮಹೋತ್ಸವದ ಪ್ರಾರಂಭದ ದಿನ ಸಂಜೆ ಗೋಧೂಳಿ ಲಗ್ನದಲ್ಲಿ ಗ್ರಾಮ ದೇವತೆ ಹಾಗೂ ಪರಿವಾರ ದೇವತೆಗಳಿಗೆ ಅಭಿಷೇಕ, ಗಂಗಾಪೂಜೆ, ಅಮ್ಮನವರಿಗೆ ಮಹಾರುದ್ರಾಭಿಷೇಕ ಪೂಜೆ ನೆರವೇರಿತು.

ಇದಾದ ಬಳಿಕ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ಮಾಡಲಾಯಿತು. ನಂತರ ಅಮ್ಮನವರನ್ನು ಸುಗ್ಗಿ ಮಂಟಪಕ್ಕೆ ಕರೆತಂದು ರಾತ್ರಿ ಉತ್ಸವವನ್ನು ನಡೆಸಲಾಯಿತು.

ಎರಡನೇ ದಿನ ಮತ್ತೊಮ್ಮೆ ಅಮ್ಮನವರನ್ನು ಬನದ ಬಳಿ ಕರೆತಂದು ಗಂಗಾಸ್ಥಾನದಲ್ಲಿ ಪಂಚಾಮೃತ ಅಭಿಷೇಕ ಮಾಡಿ,ಮಹಾಮಂಗಳಾರತಿ ಹಾಗೂ ಹಗಲು ಉತ್ಸವ ಜರುಗಿತು.

ಮೂರನೆ ಹಾಗೂ ಕೊನೇದಿನ ಶ್ರೀ ಹವಳಪ್ಪ ಸ್ವಾಮಿಯವರಿಗೆ ಮತ್ತು ಚಿಕ್ಕಮ್ಮನವರಿಗೆ ಅಮ್ಮನವರ ಬನದಲ್ಲಿ ಕವಳ ಕಾರ‍್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ವೇಳೆ ಸಮಿತಿಯ ಅಧ್ಯಕ್ಷ ಹೆಚ್ .ಪಿ. ಗೋಪಾಲ್ ಮಾತನಾಡಿ, ಹಲವಾರು ವರ್ಷಗಳಿಂದ ಅಮ್ಮನವರ ಜಾತ್ರಾ ಮಹೋತ್ಸವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುವ ಈ ಕಾರ್ಯಕ್ರಮಕ್ಕೆ ಸಾವಿರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಅಪೂರ್ಣಗೊಂಡಿರುವ ದೇವಸ್ಥಾನದ ಗೋಪುರ ಕಾಮಗಾರಿಗೆ ಭಕ್ತರು ತನು,ಮನ,ಧನ ಸಹಾಯ ಮಾಡಬೇಕೆಂದರು.

ಕಾರ್ಯದರ್ಶಿ ಹೆಚ್.ಬಿ.ದಿನೇಶ್ ಮಾತನಾಡಿ, ಈ ಸ್ಥಳವು ಕೆರೆಕೋಡಮ್ಮನವರ ಮೂಲ ಸ್ಥಳವಾಗಿದೆ. ನೂರಾರು ಕಿ.ಮೀ. ದೂರದ ಗ್ರಾಮಗಳಿಂದ ಭಕ್ತರು, ಮನೆ ಒಕ್ಕಲಿನವರು ಆಗಮಿಸಿ ದೇವರ ಜಾತ್ರೆಯಲ್ಲಿ ತಪ್ಪದೇ ಪಾಲ್ಗೊಳ್ಳುತ್ತಾರೆ ಎಂದರು.

ಈ ವೇಳೆ ಶ್ರೀಕೆರೆಕೋಡಮ್ಮ ಸೇವಾ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಗ್ರಾಮಸ್ಥರು, ಮನೆ ಒಕ್ಕಲಿನವರು ಹಾಗೂ ಸುತ್ತ ಮುತ್ತಲ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿ ಪೂಜೋತ್ಸವವನ್ನು ಯಶಸ್ವಿಗೊಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *