
*ಮಕ್ಕಳೊಂದಿಗೆ ಉಯ್ಯಾಲೆಯಾಡಿದ ಕುರುಹಾಗಿ ಪಾದತೂಗುವ ಪದ್ಧತಿ*
ಆಲೂರು : ಕೆಂಚಾಂಬಿಕೆ ರಕ್ತಬೀಜಾಸುರನ ಸಂಹಾರ ಮಾಡಿ ದಣಿದಿದ್ದರಿಂದ ನೀರಿನ ಮೂಲವನ್ನು ಅರಸುತ್ತಾಳೆ. ಆದರೆ ಸ್ವಚ್ಛ ನೀರು ಎಲ್ಲಿಯೂ ಸಿಗದಿದ್ದರಿಂದ ಸನಿಹದ ತಗ್ಗು ಪ್ರದೇಶದ ಬಂಡೆಯೊಂದರ ಮೇಲೆ ಎಡಪಾದ, ಬಲಮಂಡಿ ಹೂಡಿ ಕುಳಿತು, ಮೊಣಕೈನಿಂದ ಗುದ್ದಿ, ನೀರು ಮಗೆದು, ಸ್ನಾನ ಮಾಡಿ, ನೀರುಕುಡಿದು, ವಿರಮಿಸುತ್ತಾರೆ. ಆಮೇಲೆ ಮೇಲೆಬಂದು ಹಳಬಂದಿ ಮರಕ್ಕೆ ಗೋಪಾಲಕ ಮಕ್ಕಳು ಉಯ್ಯಾಲೆ ಕಟ್ಟಿ, ತೂಗಿಕೊಳ್ಳುವುದನ್ನು ನೋಡಿ ತಾನೂ ತೂಗಿಕೊಳ್ಳುವ ಆಸೆಯಾಗುತ್ತದೆ. ಆ ಮಕ್ಕಳು ಮಧ್ಯಾಹ್ನದ ಆಹಾರವಾಗಿ ತಂದಿದ್ದ ನೆನೆಯಕ್ಕಿ, ಬಾಳೇಹಣ್ಣು, ಬೆಲ್ಲದ ಪಾನಕಗಳನ್ನು ತಾನೂ ಪಡೆದು ಸವಿದ ನಂತರ ಜೋಕಾಲಿಯಾಡಿ, ತನ್ನ ಆಯಾಸ ಪರಿಹರಿಸಿಕೊಳ್ಳುತ್ತಾರೆ. ಈ ಕುರುಹಾಗಿ ಈಗಲೂ ಶ್ರೀ ದೇವಿಯ ಪಾದವಿಟ್ಟು ತೂಗುವ ಪರಿಪಾಟವಿದೆ.
ಗೌಡರು ನೆನೆಯಕ್ಕಿಯ ಹೆಡಿಗೆಯೊಂದಿಗೆ ಕಳಸವನ್ನು ಅಲಂಕರಿಸಿ, ಪೂಜಿಸಿ, ವಾದ್ಯಮೇಳಗಳೊಂದಿಗೆ ದೇವಳದ ಮುಂದೆ ಬರುತ್ತಾರೆ. ಇತ್ತ ದೇವಿಯ ಗರ್ಭಾಂಕಣದಲ್ಲಿ ಅಭಿಷೇಕ, ಅಲಂಕಾರ, ಪೂಜೆ, ಬಲಿಪ್ರದಾನವಾಗಿ ಮಹಾಮಂಗಳಾರತಿಯಾಗಿ ದೇವಿಯ ಪಾದಗಳನ್ನು ಶಾನುಭೋಗ ಬ್ರಾಹ್ಮಣ ವಂಶಸ್ಥರು ತಂದು ಮೆರವಣಿಗೆಗೆ ಸೇರಿ, ದೇವಾಲಯ ಪ್ರದಕ್ಷಿಣೆಯ ನಂತರ ಅಲಂಕಾರಗೊಂಡ ಉಯ್ಯಾಲೆಯತ್ತ ತೆರಳುತ್ತಾರೆ. ಅಲ್ಲಿ ವೀರಭದ್ರನ ಕಳಶ, ದೇವಿಯ ಪಾದಗಳನ್ನು ಒಟ್ಟಾಗಿರಿಸಿ ಪೂಜೆ ಸಲ್ಲಿಸಿ, ನೈವೇಧ್ಯಾರ್ಥವಾಗಿ ತಂದಿರುವ ಪಾನಕ, ಕೋಸಂಬರಿಗಳು, ಗೊಜ್ಜವಲಕ್ಕಿ, ರಸಾಯನ, ಗೌಡರು ತಂದ ನೆನೆಯಕ್ಕಿ ಮುಂತಾದ ಖಾದ್ಯಗಳನ್ನು ಅರ್ಪಿಸಿ ಮಂಗಳಾರತಿ ನಂತರ ಎರಡೂ ಕುಟುಂಬದವರು ಸೇರಿ ತೂಗುವ ಆ ದೃಶ್ಯವೇ ಚೆಂದ..
ಮರಳಿ ದೇಗುಲ ತಲುಪಿದ ಮಗ ವೀರಭದ್ರನ ಸಹಿತ ಕೆಂಚಮ್ಮನಿಗೆ ಮಂಗಳಾರತಿ ನಡೆದು, ತೀರ್ಥಪ್ರಸಾದ ವಿನಿಯೋಗ ಆಗುತ್ತದೆ. ಆಮೇಲೆ ಬಂದಿದ್ದ ಭಕ್ತಸಮೂಹಕ್ಕೆ ಉಯ್ಯಾಲೆ ನೈವೇಧ್ಯದ ಪ್ರಸಾದಗಳನ್ನೂ, ಹೂವನ್ನೂ ವಿತರಿಸಿ ಇಂದಿನ ಕಾರ್ಯಕ್ರಮಕ್ಕೆ ಅಂತ್ಯಹಾಡಲಾಯಿತು.
ಈ ಸಂದರ್ಭದಲ್ಲಿ ಸೇವಾಕರ್ತರಾದ ಶಾನುಭೋಗರ ವಂಶಸ್ಥರಾದ ಶ್ರೀ ಮಂಜುನಾಥಮೂರ್ತಿ ದಂಪತಿ, ಗೌಡರ ವಂಶದ ಶ್ರೀ ಶರತ್ ದಂಪತಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಹೆಚ್ ಡಿ ಗೋಪಾಲ್ (ರಘು), ಸದಸ್ಯರು, ಅರ್ಚಕ ಶ್ರೀ ರಾಮಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
