
ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನಕೆರೆ ರಸ್ತೆಯು ಅತ್ಯಂತ ಹದಗೆಟ್ಟ ಸ್ಥಿತಿಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಕಲೇಶಪುರ ತಾಲೂಕು ಘಟಕದ ವತಿಯಿಂದ ತೀವ್ರ ಹೋರಾಟ ನಡೆಸಲಾಯಿತು.
ಅವ್ಯವಸ್ಥೆಯ ಆಗರವಾದ ಈ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರು ತುಂಬಿದ ನೀರಿನಿಂದ ಮುಚ್ಚಿ ಸಾರ್ವಜನಿಕರು ಹಾಗೂ ಶಾಲೆಗೆ ಹೋಗುವ ಮಕ್ಕಳು, ರೈತರು, ಮಹಿಳೆಯರು ಹಾಗೂ ವೃದ್ಧರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಆದರೆ ಸಂಬಂಧಪಟ್ಟ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳಿಂದ ಯಾವುದೇ ಸ್ಪಂದನೆ ಇಲ್ಲದ ಕಾರಣದಿಂದ ಬೇಸತ್ತ ಗ್ರಾಮಸ್ಥರು ಕರ್ನಾಟಕ ರಕ್ಷಣಾ ವೇದಿಕೆಯಿಂದ ಸಹಕಾರ ಪಡೆದು ತೀವ್ರವಾಗಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕು ಘಟಕದ ಅಧ್ಯಕ್ಷರಾದ ಗಗನ್ ಗೌಡ ಅವರ ಸಹಕಾರದಲ್ಲಿ ರೈತ ಘಟಕದ ಅಧ್ಯಕ್ಷರಾದ ವಸಂತ ಬೊಮ್ಮನಕೆರೆ, ಅವರ ನೇತೃತ್ವದಲ್ಲಿ ಉಪಾಧ್ಯಕ್ಷರಾದ ಪ್ರವೀಣ್, ಹಾಗೂ ರಾಜು ಶೆಟ್ಟಿ, ತ್ಯಾಗರಾಜು, ಕುಶಲ, ಮಧು, ರವಿ ಬೊಮ್ಮನಕೆರೆ, ಶಾಂತಾ, ಭವಾನಿ, ನಿಂಗಮ್ಮ ಸೇರಿದಂತೆ ಅನೇಕ ಗ್ರಾಮಸ್ಥರು ರಸ್ತೆಯ ಮಧ್ಯದಲ್ಲಿ ಗಿಡ ನೆಡುವ ಮೂಲಕ ತಮ್ಮ ಆಕ್ರೋಶವನ್ನು ಪ್ರಬಲವಾಗಿ ಹೊರ ಹಾಕಿದ್ದಾರೆ.
ಇದು ಕೇವಲ ಒಂದು ಗಿಡ ನೆಡುವ ಕಾರ್ಯವಲ್ಲ, ಇದು ನಮ್ಮ ದುಃಖದ ಪಡುವಣ, ಜನರ ಆಗ್ನಿಯ ಸ್ಪೋಟ, ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧದ ಮೌನ ಶೋಷಣೆಯ ಪ್ರತಿರೂಪವಾಗಿದೆ.ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಸ್ಥಳಕ್ಕೆ ಭೇಟಿ ನೀಡಲಾಗಿದ್ದು, ತಕ್ಷಣವೇ ಸ್ಥಳೀಯ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ಕೊಟ್ಟು , ತುರ್ತು ಅವಧಿಯಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳದಿದ್ದರೆ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ತಾಲೂಕು ಘಟಕದ ಅಧ್ಯಕ್ಷ ಗಗನ್ ಗೌಡ ಎಚ್ಚರಿಕೆ ನೀಡಿದ್ದಾರೆ.
ಜನರ ಕಣ್ಮುಂದೆ ನಡೆಯುತ್ತಿರುವ ಈ ಅನ್ಯಾಯದ ವಿರುದ್ಧ ಎಲ್ಲ ಮಾಧ್ಯಮಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಪ್ರಜಾಪ್ರಭುತ್ವವನ್ನು ನಂಬಿರುವ ಪ್ರತಿಯೊಬ್ಬರೂ ಬೆಂಬಲ ನೀಡಬೇಕು ಎಂದರು .



