
ಹಾಸನ – ತಾಲ್ಲೂಕಿನ ಕೆ ಬ್ಯಾಡರಹಳ್ಳಿ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ, ಕಾರಕೆರೆ, ಹಾಸನದ ಅಂತಿಮ ವರ್ಷದ ಕೃಷಿ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳಿoದ “ಜಿ9 ಬಾಳೆಯ ಅಂಗಾಂಶ ಕೃಷಿ” ಕುರಿತ ಜಾಗೃತಿ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಂಗಾಂಶ ಕೃಷಿಯ ಅರ್ಥವನ್ನು ವಿವರಿಸಿ, “ಗಿಡದ ಒಂದು ಭಾಗವನ್ನು ಬಳಸಿಕೊಂಡು ಅದನ್ನು ಸಂಪೂರ್ಣ ಸಸಿಯಾಗಿ ಬೆಳೆಸುವ ವಿಧಾನವೇ ಅಂಗಾಂಶ ಕೃಷಿ” ಎಂದು ತಿಳಿಸಿದರು.
ಈ ಸಸಿಗಳನ್ನು ಮೊದಲು ಲ್ಯಾಬೊರೇಟರಿಯಲ್ಲಿನ ಟಿಶ್ಯೂ ಕಲ್ಚರ್ ಬಾಟಲಿಗಳಲ್ಲಿ ಬೆಳೆಸಿ. ನಂತರ ಪಾಲಿಹೌಸ್‌ನಲ್ಲಿ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡಿ, ರೈತರಿಗೆ ಆರೋಗ್ಯಕರ ಸಸಿಗಳ ರೂಪದಲ್ಲಿ ನೀಡಲಾಗುತ್ತದೆ ಎಂದು ವಿವರಿಸಲಾಯಿತು.
ಜಿ9 ಬಾಳೆ ತಳಿ ಈ ತಂತ್ರಜ್ಞಾನದಿಂದ ಅಭಿವೃದ್ಧಿಗೊಂಡಿದ್ದು ” ಟಿಶ್ಯೂ ಕಲ್ಚರ್ ಬಾಳೆ” ಎಂದೇ ಪ್ರಸಿದ್ಧವಾಗಿದೆ. ಸಾಮಾನ್ಯ ಬಾಳೆಗಿಂತ ಇದು ವಿಭಿನ್ನವಾಗಿದ್ದು ಕಡಿಮೆ ಎತ್ತರದ ಬಲಿಷ್ಠ ಕೊಂಬೆಗಳು, ಸಮಾನ ಬೆಳವಣಿಗೆ, ಸಿಹಿಯಾದ ಹಣ್ಣುಗಳು, ಉತ್ತಮ ರೋಗ ನಿರೋಧಕ ಶಕ್ತಿ ಹಾಗೂ ಎಕರೆಗೆ 50-60 ಟನ್‌ಗಳವರೆಗೆ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ. ವೈರಸ್ ಮತ್ತು ಬ್ಯಾಕ್ಟಿರಿಯಾ ರಹಿತವಾಗಿರುವುದರಿಂದ ಈ ತಳಿ ಆರೋಗ್ಯಕರ ಬೆಳವಣಿಗೆ ನೀಡುತ್ತದೆ ಎಂದು ಮನವರಿಕೆ ಮಾಡಲಾಯಿತು.
