
ಸಕಲೇಶಪುರ : ಕಲೆ, ಕೌಶಲ್ಯ, ಮೂಲ ವೃತ್ತಿಯನ್ನು ವಿಶ್ವಕರ್ಮ ಸಮುದಾಯ ಮುಂದುವರೆಸಿಕೊಂಡು ಹೋಗುವುದು ಮುಂದಿನ ಜನಾಂಗಕ್ಕೆ ಅಗತ್ಯವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಅಭಿಪ್ರಾಯಿಸಿದರು.
ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ವಿಶ್ವಕರ್ಮ ಸಮಾಜ ವತಿಯಿಂದ ನಡೆದ ವಿಶ್ವಕರ್ಮ ಜಯಂತೋತ್ಸವದಲ್ಲಿ ಮಾತನಾಡಿದರು.
ಇಡೀ ಜಗತ್ತಿನಾಧ್ಯಂತ ಎಂತಹ ಹೈಟೆಕ್ ಕಟ್ಟಡಗಳು ನಿರ್ಮಾಣ ಆಗಿರಬಹುದು, ಆದರೆ ನಮ್ಮ ದೇಶದಲ್ಲಿ ವಿಶ್ವಕರ್ಮ ಶಿಲ್ಪಿಗಳಿಂದ ಕಲಾತ್ಮಕವಾಗಿ ನಿರ್ಮಾಣ ಆಗಿರುವ ದೇವಾಲಯಗಳಿಗೆ ಸರಿಸಾಟಿಯಾದ ಯಾವುದೇ ಒಂದು ಕಟ್ಟಡ ಜಗತ್ತಿನಲ್ಲಿ ಇಲ್ಲ ಎಂದರು.ಪ್ರದಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬವೂ ಸಹ ವಿಶ್ವಕರ್ಮ ಜಯಂತಿಯಂದೇ ಇರುವುದು ಒಂದು ಒಳ್ಳೆಯ ಅವಕಾಶ. ವಿಶ್ವಕರ್ಮರ ಕುಲ ಕಸುಬು ಮುಂದುವರೆಸಿಕೊಂಡು ಆರ್ಥಿಕವಾಗಿ ಸಬಲೀಕರಣ ಆಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರದಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಲಕ್ಷಾಂತರ ಕುಟುಂಬಗಳು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್ ಮಾತನಾಡಿ, ಸುಂದರವಾದ ದೇಗುಲ, ದೇವಿಯ ನಿರ್ಮಾಣದಿಂದ ಒಂದು ಹೆಣ್ಣು ಸೌಂದರ್ಯವನ್ನು ಹೆಚ್ಚು ಮಾಡುವ ಒಡವೆ ವರೆಗೂ ವಿಶ್ವಕರ್ಮರ ಕೈ ಕಸುಬು ಅದ್ಬುತವಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹರೀಶ್ ಪಿ.ಎಂ. ವಿಶ್ವಕರ್ಮ ಯೋಜನೆ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಶ್ರೀನಿವಾಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಲಯ ಅರಣ್ಯ ಅಧಿಕಾರಿ ಹೇಮಂತ್ ಕುಮಾರ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮುರುಗೇಶ್, ಉಪ ತಹಶೀಲ್ದಾರ್ ಮೋಹನ್, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹರೀಶ್, ನಿವೃತ್ತ ತಹಶೀಲ್ದಾರ್ ಅಣ್ಣೇಗೌಡ, ಕಾಳಿಕಾಂಬ ಯುವಕ ಸಂಘದ ಅಧ್ಯಕ್ಷ ಚಂದ್ರಾಚಾರ್, ಬಿಜೆಪಿ ಮುಖಂಡ ದೇಖಲ ಮೇಘರಾಜ್, ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಕಮಲಾ ಸಂಪತ್, ತಾಲ್ಲೂಕು ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ರೇಣುಕಾ ಪ್ರಸಾದ್ ಸ್ವಾಗತಿಸಿದರು.
ತಾಲ್ಲೂಕು ಕಚೇರಿಯ ಚುನಾವಣಾ ವಿಭಾಗದ ಶಿರಸ್ತೆದಾರ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.
ತಾಲ್ಲೂಕು ವಿಶ್ವಕರ್ಮ ಸಮಾಜದಿಂದ ಇದಕ್ಕೂ ಮೊದಲು ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು.
