
ಆಲೂರು : ಪಂಚ ಗ್ಯಾರೆಂಟಿ ಯೋಜನೆ ಅನೇಕ ಕುಟುಂಬಗಳಿಗೆ ” ಭರವಸೆ ” ನೀಡಿರುವ ಯೋಜನೆಯಾಗಿದ್ದು, ಪಂಚ ಗ್ಯಾರೆಂಟಿ ಯೋಜನೆ ತಲುಪದಿರುವ ಕುಟುಂಬಗಳನ್ನು ಅಧಿಕಾರಿಗಳು ಗುರುತಿಸಿ ಕ್ರಮ ವಹಿಸುವಂತೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪೃಥ್ವಿ ಜಯರಾಮ್ ಸೂಚಿಸಿದರು.
ತಾಲೂಕಿನ ಪಾಳ್ಯ ಗ್ರಾಮ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಹೋಬಳಿ ಮಟ್ಟದ ” ಪಂಚ ಗ್ಯಾರಂಟಿ ಯೋಜನೆ ” ಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ. ಈ ಯೋಜನೆಗಳು ಜನರ ಆರ್ಥಿಕ ಸಬಲೀಕರಣಕ್ಕೆ ನೆರವಾಗಿದ್ದು ಬಡವರ, ದೀನ ದಲಿತರ ರಕ್ಷಣೆ ಮತ್ತು ಬಡತನ ಹಸಿವು ನಿವಾರಣೆ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮೇಲೆತ್ತುವುದು ಹಾಗೂ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮಾಡಲು ಪಂಚ ಯೋಜನೆಗಳನ್ನು ಜಾರಿಗೊಳಿಸಲಾಯಿತು.
ಗ್ಯಾರೆಂಟಿ ಯೋಜನೆ ಯಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ಹೊರೆ ಬೀಳದೆ ಹಣಕಾಸು ವ್ಯವಸ್ಥೆಯಲ್ಲಿ ಬದಲಾವಣೆ ತರುವ ಮೂಲಕ ರಾಜ್ಯ ಸರ್ಕಾರ ಜನತೆಯ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ.ಕೆಲ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ, ಸಂಬಂಧಪಟ್ಟ 5 ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಿವು ಕಾರ್ಯಕ್ರಮವನ್ನು ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು.
ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಶಿಬಿರಗಳನ್ನು ನಡೆಸಲಾಗುವುದು. ಗ್ರಾಮೀಣ ಭಾಗದಲ್ಲಿ ತಾಂತ್ರಿಕ ಕಾರಣಗಳಿಂದ ಯೋಜನೆಯಿಂದ ಹೊರಗಿರುವ ಅರ್ಹ ಫಲಾನುಭವಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಬ್ರಹ್ಮಣ್ಯ ಶರ್ಮ ಮಾತನಾಡಿ, ತಾಲ್ಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆ ಶೇ 98% ರಷ್ಟು ಪ್ರಗತಿಯಲ್ಲಿದೆ. ಸಂಬಂಧಪಟ್ಟ ಎಲ್ಲಾ ಐದು ಇಲಾಖೆ ಅಧಿಕಾರಿಗಳು ಯೋಜನೆಯ ಲಾಭವನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಶೇ 100% ಫಲಾನುಭವಿಗಳನ್ನು ತಲುಪುವ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಕ್ರಮಗಳನ್ನು ನಿಯಮಾನುಸಾರ ಪಾಲಿಸಬೇಕಾಗಿದೆ. ತಾಲೂಕಿನ ಗಂಜಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಿ ಸುಮಾರು 70 ಅಲೆಮಾರಿ ಹಾಗೂ ಮೀನುಗಾರರ ಕುಟುಂಬ ವಾಸಿಸುತ್ತಿದ್ದು ಅವರಿಗೆ ನಿಯಮನುಸಾರ ಪಡಿತರ ವಿತರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಮ್ಮ ತಾಲೂಕಿನಲ್ಲಿ ಯುವ ನಿಧಿ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಯುವ ನಿರುದ್ಯೋಗಿ ಗಳನ್ನು ಯೋಜನೆ ಒಳಗೆ ತರುವ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ತಾಲೂಕಿನ ಸಂಬಂಧಪಟ್ಟ ಕಾಲೇಜುಗಳಲ್ಲಿ ಹೆಚ್ಚಿನ ಅರಿವು ಕಾರ್ಯಕ್ರಮವನ್ನು ಪಂಚ ಗ್ಯಾರಂಟಿ ತಾಲೂಕು ಸಮಿತಿ ಮತ್ತು ಉದ್ಯೋಗ ವಿನಿಮಯ ಕೇಂದ್ರ ಒಳಗೊಂಡಂತೆ ಮಾಡಲಾಗುವುದು ಎಂದರು.
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ವಿಜಯಲಕ್ಷ್ಮಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 340 ಫಲಾನುಭವಿಗಳು ಯುವನಿಧಿ ಯೋಜನೆಯಲ್ಲಿ ನೋಂದಾವಣೆಯಾಗಿದ್ದು ಡಿ ಬಿ ಟಿ ಮುಖಾಂತರ 271 ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಶಿಬಿರಗಳನ್ನು ಮಾಡಿ ಇನ್ನು ಹೆಚ್ಚಿನ ಫಲಾನುಭವಿಗಳನ್ನು ಈ ಯೋಜನೆ ಅಡಿ ನೋಂದಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲೂಕು ಆಹಾರ ನಿರೀಕ್ಷಕ ಮೋಹನ್ ರವರು ಮಾತನಾಡಿ ಅನ್ನಭಾಗ್ಯ ಯೋಜನೆ ಅಡಿ ತಾಲೂಕಿನ 23,400 ಕುಟುಂಬಗಳ 75,000 ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆಯುತ್ತಿದ್ದು, ಬಿಪಿಎಲ್ ಕಾರ್ಡ್ ದಾರರಿಗೆ 2 ಕೆ ಜಿ ಅಕ್ಕಿ, 3 ಕೆ ಜಿ ರಾಗಿಯನ್ನು ಒಳಗೊಂಡಂತೆ ಪ್ರತಿ ಸದಸ್ಯರಿಗೆ ಒಟ್ಟು 5 ಕೆ.ಜಿ ಪಡಿತರ ವಿತರಣೆಯಾಗುತ್ತಿದೆ. ಅಂತ್ಯೋದಯ ಕಾರ್ಡ್ದಾ ರರಿಗೆ ಪ್ರತಿ ಕಾಡಿಗೆ 21 ಕೆ ಜಿ ರಾಗಿ, 14 ಕೆಜಿ ಅಕ್ಕಿ ವಿತರಣೆ ಯಾಗುತ್ತಿದೆ. ಗ್ಯಾರಂಟಿ ಯೋಜನೆಯ ನಿಯಮದಂತೆ ಅನ್ನಭಾಗ್ಯ ಯೋಜನೆ ಅಡಿ ಯಾವುದೇ ಲೋಪ ಆಗದ ರೀತಿ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಗೃಹಜೋತಿ ಯೋಜನೆ ಅಡಿ ಆಗಸ್ಟ್ ತಿಂಗಳಲ್ಲಿ ತಾಲೂಕಿನಲ್ಲಿ 24,636 ಮನೆಗಳಿಗೆ ಒಟ್ಟು 93ಲಕ್ಷ ಮೊತ್ತವನ್ನು ಯೋಜನೆ ಅಡಿ ವಿನಿಯೋಗಿಸಲಾಗಿದೆ ಎಂದು ಇಲಾಖಾಧಿಕಾರಿ ಶಶಿಕುಮಾರ್ ಮಾಹಿತಿ ನೀಡಿದರು.
ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 22 ಸಾವಿರ ಅರ್ಹ ಫಲಾನುಭವಿಗಳಿಗೆ ಈಗಾಗಲೇ ನಿಯಮನುಸಾರ ಜೂನ್ ತಿಂಗಳವರೆಗೂ ಡಿ ಬಿ ಟಿ ಮುಖಾಂತರ ಹಣ ಪಾವತಿಯಾಗಿದೆ.
ಶೀಘ್ರದಲ್ಲೇ ಸರ್ಕಾರ ಉಳಿದ ತಿಂಗಳ ಗೃಹಲಕ್ಷ್ಮಿ ಯೋಜನೆ, ಹಣ ಬಿಡುಗಡೆ ಮಾಡಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ತಾಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪೃಥ್ವಿ ಜಯರಾಮ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಶರ್ಮ, ಸದಸ್ಯರಾದ ಯೋಗೀಶ್ ಭರತವಳ್ಳಿ, ಶ್ರೀಧರ್ ಹಳೆ ಆಲೂರು, ಮಧು ಅಬ್ಬನ, ರುದ್ರಕುಮಾರ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ವಿಜಯಲಕ್ಷ್ಮಿ, ತಾಲೂಕು ಆಹಾರ ನಿರೀಕ್ಷಕ ಮೋಹನ್, ಸೆಸ್ಕಾಂ ಇಲಾಖಾಧಿಕಾರಿ ಶಶಿಕುಮಾರ್, ತಾಲೂಕು ಪಂಚಾಯಿತಿ ಸಿಬ್ಬಂದಿಯ ಅಶೋಕ್ , ಪಾಳ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದರ್ಶನ್ ಇದ್ದರು.
