
ಸಕಲೇಶಪುರ : ಪಟ್ಟಣದ ರಾಜಬೀದಿಯ ಎಲ್.ಎಂ.ರಸ್ತೆಯ ಸರ್ಕಲ್‌ನಲ್ಲಿ ನೂತನ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು ಅವರು, “ಇಂದು ಎ.ಕೆ. ಸಾಗರ್ ವೃತ್ತದಲ್ಲಿ ಧ್ವಜಸ್ತಂಭ ಹಾಗೂ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿದೆ. ಇದು ಕೇವಲ ಅಭಿವೃದ್ದಿ ಕೆಲಸವಲ್ಲ, ಸ್ಥಳೀಯ ವರ್ತಕರು ಹಾಗೂ ಸಂಘಟನೆಗಳ ಹೋರಾಟದ ಪ್ರತಿಫಲವೂ ಹೌದು” ಎಂದು ಹೇಳಿದರು.
“ನಾವು ಹುಟ್ಟಿದ ತಾಲೂಕಿನಲ್ಲಿ ಒಳ್ಳೆಯ ಕೆಲಸ ಮಾಡಲು ಪ್ರತಿಯೊಬ್ಬರೂ ಬದ್ಧರಾಗಿರಬೇಕು. ನಗರದ ಸ್ವಚ್ಛತೆಗೆ ಎಲ್ಲರೂ ಸಹಕರಿಸಬೇಕು ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಮುಂದಾಳತ್ವದಿಂದ ಮಾತ್ರ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ದೇಶ ಸುಬೀಕ್ಷೆಯಾದರೆ ರಾಜ್ಯ ಸುಬೀಕ್ಷೆಯಾಗುತ್ತದೆ, ರಾಜ್ಯ ಸುಬೀಕ್ಷೆಯಾದರೆ ನಗರ-ಪಟ್ಟಣ ಹಾಗೂ ಹಳ್ಳಿಗಳ ಉದ್ದಾರವಾಗುತ್ತದೆ. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕೆ ಮಾಡುವ ಪ್ರತಿಯೊಂದು ಕೆಲಸ ಉಪಯುಕ್ತವಾದದ್ದು ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದ್ದರಿಂದ ನಮ್ಮ ಅಧಿಕಾರಾವಧಿಯಲ್ಲಿ ತಾಲೂಕಿನ ಬೆಳವಣಿಗೆಗೆ ಪ್ರಾಮುಖ್ಯತೆ ನೀಡುವುದು ಅವಶ್ಯ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಸರಿತಾ ಗಿರೀಶ್, ಇಸ್ರಾರ್, ವನಜಾಕ್ಷಿ, ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ, ಕರವೇ ಅಧ್ಯಕ್ಷ ರಮೇಶ್ ಪೂಜಾರಿ, ವೀರಯೋದ ಎ.ಕೆ. ಸಾಗರ್ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಜಮೀಲ್, ಕಾರ್ಯದರ್ಶಿ ಜಗದೀಶ್, ಪದಾಧಿಕಾರಿಗಳಾದ ಸಲೀಂ, ಚಿಂಟೂ ಹಾಗೂ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಜೈ ಬೀಮ್ ಮಂಜು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


