
ಸಕಲೇಶಪುರ : ಮದ್ಯಪಾನ ನಿಷೇಧದಂತಹ ಕ್ರಾಂತಿಕಾರಿ ನಿರ್ಣಯ ಕೈಗೊಳ್ಳಲು ಸರ್ಕಾರದಲ್ಲಿ ಗಾಂಧೀಜಿಯ ಇಚ್ಛಾಶಕ್ತಿ ಬೇಕಾಗಿದೆ,” ಎಂದು ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಹೇಳಿದರು.
ಮಂಗಳವಾರ ಪಟ್ಟಣದ ಪುರಭವನದಲ್ಲಿ ನಡೆದ ಮಹಾತ್ಮ ಗಾಂಧೀಜಿಯ 156ನೇ ಜಯಂತಿ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ ಸಿ ಟ್ರಸ್ಟ್, ರೋಟರಿ ಕ್ಲಬ್ ಮತ್ತು ಲಯನ್ಸ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ಇಂದು ಸಮಾಜದಲ್ಲಿ ದುಷ್ಚಟಗಳು ಮನೆಮಾಡಿದ್ದು, ಅನೇಕ ಯುವ ಜೀವಗಳು ಮುಪ್ಪಿಗೂ ಮುನ್ನವೇ ನಾಶವಾಗುತ್ತಿವೆ. ದೀರ್ಘಾಯುಷಿ ಆಗಬೇಕಾದರೆ ಮದ್ಯಪಾನ, ಮಾದಕ ವಸ್ತು, ಧೂಮಪಾನದಂತಹ ದುಷ್ಚಟಗಳಿಂದ ದೂರ ಇರುವುದು ಅತ್ಯಂತ ಅಗತ್ಯ. ಆರೋಗ್ಯವಂತ ಜೀವನವೇ ನಿಜವಾದ ಭಾಗ್ಯ,” ಎಂದರು.
ಅವರು ಮುಂದುವರಿದು, “ಮಾದಕ ವಸ್ತುಗಳು ಅನೇಕ ಕುಟುಂಬಗಳ ನೆಮ್ಮದಿಯನ್ನು ಕಸಿದುಕೊಂಡಿವೆ. ಮಹಿಳೆಯರು ತಮ್ಮ ಕುಟುಂಬ ಸದಸ್ಯರು ದುಷ್ಚಟಗಳಿಗೆ ಬಲಿಯಾಗದಂತೆ ಕಾಪಾಡುವ ಜವಾಬ್ದಾರಿ ಹೊತ್ತುಕೊಳ್ಳಬೇಕು. ದೇಶದಿಂದ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ಕಿತ್ತೆಸೆದಾಗ ಮಾತ್ರ ಗಾಂಧೀಜಿಯ ತತ್ವಗಳು ನಿಜವಾಗಿ ನೆಲೆಸುತ್ತವೆ,” ಎಂದು ಹೇಳಿದರು.
ಮಾಜಿ ಸಚಿವ ಎಚ್,ಕೆ ಕುಮಾರಸ್ವಾಮಿಮಾತನಾಡಿ,ಮದ್ಯಪಾನ ನಿಷೇದದಂತಹ ಕ್ರಾಂತಿಕಾರಿ ನಿರ್ಣಯ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇರಬೇಕು ಎಂದು ಹೇಳಿದರು. ಸರ್ಕಾರಗಳು ಗಾಂದಿ ಹೆಸರು ಹೇಳುತ್ತಾ ಅವರ ತತ್ವಗಳನ್ನು ಗಾಳಿಗೆ ತೂರುತ್ತಿವೆ. ಮದ್ಯಪಾನ ಮಾಡುವುದು ಕುಟುಂಬಕ್ಕೆ,ಸಮಾಜಕ್ಕೆ ಮಾರಕ ಎಂಬುದನ್ನು ಗಾಂದಿಜೀ ಅಂದೇ ಪ್ರತಿಪಾಧಿಸಿದ್ದರು. ಆದರೆ, ಇಂದು ಅಧಿಕಾರದಲ್ಲಿರುವ ಸರ್ಕಾರಗಳು ಅಬಕಾರಿ ಇಲಾಖೆಯಿಂದ ಬರುವ ವರಮಾನಕ್ಕೆ ಅವಲಂಭಿತವಾಗಿವೆ. ಪ್ರತಿ ತಿಂಗಳು ಅಬಕಾರಿ ಇಲಾಖೆಯಿಂದ ವರಮಾನ ಹೆಚ್ಚುವಂತೆ ಮಾಡುವ ಮೂಲಕ ಇಂದು ಪರೋಕ್ಷವಾಗಿ ಜನರನ್ನು ದುಶ್ಚಟಗಳಿಗೆ ದೂಡುವ ಮೂಲಕ ಗಾಂದಿ ತತ್ವಗಳನ್ನು ಮೂಲೆಗುಂಪು ಮಾಡುತ್ತಿವೆ. ಈ ಮದ್ಯೆ ಧರ್ಮಸ್ಥಳ ಸ್ವಸಹಾಯ ಸಂಘ ಮದ್ಯಪಾನ ಚಟದಿಂದ ಹೊರತರುವ ಕೆಲಸದಲ್ಲಿತೊಡಗಿಕೊಂಡಿರವುದು ನಿಜಕ್ಕೂ ಶ್ಲಾಘನೀಯ ಎಂದರು.
ತಾಲೂಕು ಗ್ಯಾರೆಂಟಿ ಅನುಷ್ಠಾನ ಯೋಜನೆಯ ಅಧ್ಯಕ್ಷ ಮುರುಳಿ ಮೋಹನ್ ಮಾತನಾಡಿ, ಮದ್ಯಪಾನ ನಿಷೇಧದ ಆಶಯವನ್ನು ಸರ್ಕಾರ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಮದ್ಯಪಾನದಿಂದ ಅನೇಕ ಬಡ ಕುಟುಂಬಗಳು ನಾಶವಾಗಿವೆ. ಧರ್ಮಸ್ಥಳ ಸಂಸ್ಥೆಯ ಶಿಬಿರಗಳು ಜನಜಾಗೃತಿಗೆ ಸಹಾಯವಾಗುತ್ತಿವೆ. ರಾಜ್ಯ ಸರ್ಕಾರ ಮಹಿಳೆಯರಿಗೆ ತಿಂಗಳಿಗೆ ₹2000 ಧನಸಹಾಯ, ಉಚಿತ ಅಕ್ಕಿ ಮತ್ತು ಉಚಿತ ಬಸ್ ಪ್ರಯಾಣದಂತಹ ಯೋಜನೆಗಳ ಮೂಲಕ ಬಡವರ ಬದುಕಿನಲ್ಲಿ ಬದಲಾವಣೆ ತಂದಿದೆ,” ಎಂದರು.
ಮದ್ಯಪಾನ ನಿಷೇಧಕ್ಕೆ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ತೀರ್ಮಾನ ಕೈಗೊಳ್ಳಬೇಕು. ವಿದ್ಯಾಭ್ಯಾಸವೇ ಶಕ್ತಿ; ವಿದ್ಯಾರ್ಥಿಗಳು ಸಮಾಜದ ಬದಲಾವಣೆಯ ಶಕ್ತಿಯಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿರಾಜ್‌ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷ ಹೊನ್ನವಳ್ಳಿ ಸತೀಶ್, ಜಿಲ್ಲಾ ಜನಜಾಗ್ರತಿವೇದಿಕೆಯ ಜಿಲ್ಲಾಧ್ಯಕ್ಷ ಡಾ.ನವೀನ್‌ಚಂದ್ರಶೆಟ್ಟಿ,ಲಯನ್ಸ್ ಸಂಸ್ಥೆ ಅಧ್ಯಕ್ಷ ಗಿರೀಶ್‌ಮಂಜುನಾಥ್, ಚನ್ನವೇಣಿ ಎಂ ಶೆಟ್ಟಿ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜೈಬೀಮ್ ಮಂಜುನಾಥ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಜೇಶ್ ಮುಂತಾದವರಿದ್ದರು.



