
ಹಾಸನ : ಜಿಲ್ಲೆಯ ಕಾಫಿ ಬೆಳೆಗಾರರು ಅಧಿಕ ಮಳೆಯಿಂದ ನಷ್ಟದಲ್ಲಿರುವಾಗ ಹವಾಮಾನ ವೈಫರಿತ್ಯದಿಂದ ಅಳಿದುಳಿದ ಕಾಫಿ ಬೆಳೆಯನ್ನು ಕಾಪಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದ್ದು ಇದರ ಜೊತೆಗೆ ಕಾಫಿ ಕಳ್ಳತನ ಹೆಚ್ಚಾಗಿದೆ.
ಮಳೆಗೆ ಕೊಳೆತ ಕಾಫಿ: ಅಪಾರ ನಷ್ಟ ಹಾಸನ ಜಿಲ್ಲೆಯ ಕಾಫಿ ಬೆಳೆಯುವ ತಾಲೂಕುಗಳಾದ ಬೇಲೂರು, ಸಕಲೇಶಪುರ, ಆಲೂರು, ಅರಕಲಗೂಡಿನಲ್ಲಿ ನಿರಂತರವಾಗಿ ಬಿಟ್ಟು ಬಿಡದೇ ಸುರಿದ ಮಳೆಯಿಂದಾಗಿ ಬಹುತೇಕ ಕಾಫಿಗಿಡಗಳು ಕೊಳೆ ರೋಗಕ್ಕೆ ತುತ್ತಾಗಿದೆ. ಕೊಳೆ ರೋಗದಿಂದಾಗಿ ಅಂದಾಜು ಶೇ. ೫೦ ಬೆಳೆ ನಾಶವಾಗಿದೆ ಎಂದು ಕಾಫಿ ಬೆಳೆಗಾರರು ತಮ್ಮ ನೋವನ್ನು ಹೊರಹಾಕಿದ್ದು ಜಿಲ್ಲಾದ್ಯಂತ ಒಟ್ಟಾರೆ ಕಾಫಿ ಉತ್ಪಾದನೆಯು ಕುಂಠಿತಗೊಳ್ಳುವ ಆತಂಕ ಎದುರಾಗಿದೆ.
ಕಾಡಿನ ಮಧ್ಯೆ ಕಣ ನಿರ್ಮಾಣ:ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಕಾನಳ್ಳಿ ವ್ಯಾಪ್ತಿಯ ಖಾಸಗಿ ವ್ಯಕ್ತಿಯ ಹಿಡುವಳಿ ಜಮೀನಿನಲ್ಲಿ ಅನಾಮಿಕ ವ್ಯಕ್ತಿಗಳು ನಂಜೇಗೌಡ ಎಂಬುವವರ ತೋಟದಲ್ಲಿ ಕಾಫಿ ಕಳ್ಳತನ ಮಾಡಿ ಬಿಸಿಲಿನಲ್ಲಿ ಸುಲಭವಾಗಿ ಒಣಗಿಸಲು ಎತ್ತರದ ಮರಗಳನ್ನು ಕಡಿದು ಪ್ರಖರ ಬಿಸಿಲು ಬೀಳುವ ಜಾಗದಲ್ಲಿ ತಾತ್ಕಾಲಿಕ ಕಣವನ್ನು ನಿರ್ಮಿಸಿ ಕಾಫಿ ಚರಿಯನ್ನು ಹರಡಿದ್ದರು. ಈ ಘಟನೆ ಬೆಳಕಿಗೆ ಬಂದ ಬಳಿಕ ಕಣ ನಿರ್ಮಾಣ ಮಾಡಿ ಹರಡಿದ್ದ ಕಾಫಿ ವಿಚಾರಕ್ಕೆ ಸಂಬಂಧಿಸಿದಂತೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
