
ಸಕಲೇಶಪುರ : ಪುರಸಭೆ ಮುಖ್ಯಾಧಿಕಾರಿ ಕಚೇರಿಗೆ ಅಪರಿಚಿತ ಕಿಡಿಗೇಡಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಬಾಟಲ್‌ನಲ್ಲಿ ಪೆಟ್ರೋಲ್ ತಂದು ಮುಖ್ಯಾಧಿಕಾರಿ ಮಹೇಶ್ವರಪ್ಪ ಅವರ ಛೇಂಬರ್‌ಗೆ ಸುರಿದು ಬೆಂಕಿ ಹಾಕಿದ ಪರಿಣಾಮವಾಗಿ, ಕಚೇರಿಯಲ್ಲಿದ್ದ ದಾಖಲೆಗಳ ಕೆಲವು ಭಾಗ ಬೆಂಕಿಗಾಹುತಿಯಾಗಿವೆ.
ಘಟನೆಯ ಸಮಯದಲ್ಲಿ ಮುಖ್ಯಾಧಿಕಾರಿ ಮಹೇಶ್ವರಪ್ಪ ಪುರಸಭಾ ಸದಸ್ಯರೊಂದಿಗೆ ಗೋವಾ ಪ್ರವಾಸದಲ್ಲಿದ್ದರು. ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ಹಿಂಬದಿಯಿಂದ ನುಗ್ಗಿದ ದುಷ್ಕರ್ಮಿ ಕಿಟಕಿಯಿಂದ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.
ಮುಖ್ಯಾಧಿಕಾರಿ ಛೇಂಬರ್‌ನಲ್ಲಿ ಯಾರೂ ಇರದ ಕಾರಣದಿಂದ ಭಾರೀ ಅನಾಹುತ ತಪ್ಪಿದೆ. ವ್ಯಾಪಾರ ಪರವಾನಗಿ ನೀಡದಿರುವ ದ್ವೇಷದಿಂದಲೇ ಈ ಕೃತ್ಯ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಪುರಸಭೆ ಕಚೇರಿ ಪೊಲೀಸ್ ಠಾಣೆಯ ಅನತಿದೂರದಲ್ಲೇ ಇರುವುದರಿಂದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಘಟನೆಯ ಕುರಿತು ಶಾಸಕ ಸಿಮೆಂಟ್ ಮಂಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಶುಕ್ರವಾರ ಸಂಜೆ ವ್ಯಕ್ತಿಯೊಬ್ಬ ಪುರಸಭಾ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿ, ನಂತರ ಮುಖ್ಯಾಧಿಕಾರಿ ಕಚೇರಿಯೊಳಗೆ ಬೆಂಕಿ ಹಚ್ಚಿದನೆಂದು ಪ್ರಾಥಮಿಕ ಮಾಹಿತಿ ತಿಳಿದಿದೆ
ಸಿಸಿಟಿವಿ ದೃಶ್ಯಗಳಲ್ಲಿ ವ್ಯಕ್ತಿಯೊಬ್ಬನು ಬೆಂಕಿ ಹಚ್ಚುತ್ತಿರುವುದು ದಾಖಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಲಿಂಗರಾಜು ಎಂಬಾತ ತನ್ನ ಕೆಲಸ ಆಗದ ಹಿನ್ನೆಲೆಯಲ್ಲಿ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿದೆ.
ಅಧಿಕಾರಿಗಳು ತಕ್ಷಣ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. “ಅಧಿಕಾರಿಗಳು ಭಯದ ವಾತಾವರಣದಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ಉಂಟಾಗಬಾರದು; ಪೊಲೀಸರು ಸಮಗ್ರ ತನಿಖೆ ನಡೆಸಬೇಕು,” ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪುರಸಭೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ಆಧಾರದ ಮೇಲೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.
