
ಆಲೂರು : ಕನ್ನಡವೆಂದರೆ ಬರಿ ಭಾಷೆಯಲ್ಲ, ಬದುಕಾಗಬೇಕು ಕನ್ನಡ ಭಾಷೆ ಕೇವಲ ಆಡುವುದಕ್ಕೆ, ಸಂವಹನಕ್ಕಷ್ಟೇ ಇರುವ ಮಾಧ್ಯಮವಲ್ಲ, ಅದು ನಮ್ಮ ಪರಿಭಾಷೆಯಾಗಬೇಕು, ಬದುಕಾಗಬೇಕು, ನಾವದನ್ನು ಪ್ರೀತಿಸಿ ಉಸಿರಾಗಿಸಿಕೊಳ್ಳಬೇಕು ಎಂದು ಶ್ರೀ ಕೆಂಚಾಂಬಾ ಅನ್ನದಾಸೋಹ ಸಮಿತಿಯ ಖಜಾಂಚಿ ಜಿ ಜಿ ನಾರಾಯಣ ಶರ್ಮ ಅಭಿಪ್ರಾಯಪಟ್ಟರು
ಆಲೂರು ತಾಲೂಕಿನ ಹರಿಹಳ್ಳಿಯ ಶ್ರೀ ಕೆಂಚಾಂಬಾ ದೇವಸ್ಥಾನದ ವೃತ್ತದಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆಯು ಏರ್ಪಡಿಸಿದ್ದ ೭೦ನೇ ಕನ್ನಡರಾಜ್ಯೋತ್ಸವದ ಅಂಗವಾಗಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಯಶೋಧ ಅವರು ಮಾತನಾಡಿ ವಿದ್ಯಾರ್ಥಿಗಳು ಎಳವೆಯಿಂದಲೇ ಮಾತೃಭಾಷೆಯನ್ನು ಹೃದಯಭಾಷೆಯಾಗಿ ಸ್ವೀಕರಿಸಬೇಕೆಂದು ಕರೆ ನೀಡಿದರು.
ವೇದಿಕೆಯ ಸದಸ್ಯ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ರೀ ಸೋಮೇಶ್ ನಾಡಿನ ಉದಯದ ರೂವಾರಿ ಆಲೂರು ವೆಂಕಟರಾಯರು ಹಾಗೂ ಹಳದಿ ಕೆಂಪು ಸಂಯೋಜನೆಯ ಬಾವುಟದ ಕರ್ತೃ ರಾಮಚಂದ್ರ ರಾಯರನ್ನು ಸ್ಮರಿಸಿದರು. ಭಾಷಾ ಬಳಕೆಯ ವೈವಿಧ್ಯತೆಯ ಬಗ್ಗೆ ಬೆಳಕು ಚೆಲ್ಲಿದರು.
ಪ್ರೌಢಶಾಲೆಯ ಮತ್ತೊಬ್ಬ ಶಿಕ್ಷಕರಾದ ಮೋಹನ್ ಮಾತನಾಡುತ್ತಾ ಕನ್ನಡ ಭಾಷೆಯ ಮಹತ್ವಗಳನ್ನು ಉಲ್ಲೇಖಿಸಿ ಭಾಷಾ ಬಳಕೆಯು ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗೆ ಕಾರಣವಾಯಿತು, ಕನ್ನಡ ಭಾಷೆ ಶಾಸ್ತ್ರೀಯ ಭಾಷೆಯೆಂಬ ಅಭಿದಾನಕ್ಕೆ ಪ್ರೇರಣೆಯಾಯಿತು, ಭಾಷೆಗಾಗಿ ಬೆವರಿಳಿಸಿದ ಹಲವಾರು ವೀರ ಮಹಿಳೆಯರು, ಕಲಾವಿದರು, ಕವಿ ಸಾಹಿತಿಗಳು ತೊಡಗಿಸಿಕೊಂಡದ್ದನ್ನು ವಿವರಿಸಿದರು.
ಕೆಂಚಾಂಬಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಗೋಪಾಲ್ ಮಾತನಾಡಿ ಮಂಗಳ ಕಲಾ ಸಾಹಿತ್ಯ ವೇದಿಕೆಯು ತನ್ನ ೨೭ನೇ ವರ್ಷದ ಕನ್ನಡಧ್ವಜಾರೋಹಣ ನೆವೇರಿಸಿದೆ, ಧೀರ್ಘಕಾಲ ಬಾಳಿ ಸಂಘ ಸಂಸ್ಥೆಗಳನ್ನು ಉಳಿಸಿ ಬೆಳೆಸುವ ಕೆಲಸ ತುಂಬಾ ಕಷ್ಟದ್ದು, ಆದರೂ ಈ ಸಂಘ ಅಂತಹ ಸಾಧನೆ ಮಾಡಿರುವುದು ಸ್ತುತ್ಯಾರ್ಹ, ಇನ್ನು ಭಾಷೆಯನ್ನು ಕಲಿಯುವ ಅವಶ್ಯಕತೆಯ ಜೊತೆಗೆ ಪರ ಭಾಷೆಗಳನ್ನೂ ಪ್ರೀತಿಸುವ, ಕಲಿಯುವ ಕೆಲಸ ಆಗಬೇಕು, ಅದಕ್ಕೆ ಸಂಕುಚಿತ ಮನೋಭಾವ ಸಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಪ್ರೌಢಶಾಲೆಯ ವಿದ್ಯಾರ್ಥಿಗಳು ಎರಡೂ ಶಾಲೆಗಳ ಶಿಕ್ಷಕರು, ಮಂಗಳ ಕಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷಾರಾದಿಯಾಗಿ ಸರ್ವ ಸದಸ್ಯರು, ಸ್ಥಳೀಯ ಜನತೆ ಹಾಜರಿದ್ದರು. ಮಂಗಳ ಕಲಾ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಸತ್ಯನಾರಾಯಣ ಸರ್ವರನ್ನೂ ಸ್ವಾಗತಿಸಿ ವಂದಿಸಿದರು.




