
ಸಕಲೇಶಪುರ:- ತಾಲ್ಲೂಕಿನ ಯಸಳೂರು ಹೋಬಳಿಯ ಚಂಗಡಹಳ್ಳಿ ಗ್ರಾಮಪಂಚಾಯಿತಿಯ ನಾಗನಹಳ್ಳಿ ಗ್ರಾಮದ ಕಾಫಿ ತೋಟದ ಹುತ್ತ ಒಂದರಲ್ಲಿ ಅಡಗಿದ್ದ ಸುಮಾರು ಐದು ಅಡಿಯ ಗೋದಿ ನಾಗರಹಾವನ್ನು ಸೆರೆ ಹಿಡಿಯಲಾಗಿದೆ.
ಕಳೆದ 15 ದಿನಗಳಿಂದ ಚಂಗಡಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇನಹಳ್ಳಿ ಮಧು ಅವರ ಅವರ ಕಾಫಿ ತೋಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ನಾಗರಹಾವು ಮನೆಯವರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿತ್ತು.
ಭಾನುವಾರ ಮಧ್ಯಾಹ್ನದ 2 ಗಂಟೆಗೆ ಸಮಯದಲ್ಲಿ ಮತ್ತೆ ನಾಗೇನಹಳ್ಳಿ ಮಧು ಅವರ ಕಾಫಿ ತೋಟದಲ್ಲಿ ಕಾಣಿಸಿಕೊಂಡು ತೋಟದ ಹುತ್ತದಲ್ಲಿ ಅಡಗಿಕೊಂಡಿತ್ತು. ಇದನ್ನು ನೋಡಿದ ನಾಗೇನಹಳ್ಳಿ ಮಧು ಅವರು ತಕ್ಷಣ ಉರಗ ಪ್ರೇಮಿ ಚಂಗಡಹಳ್ಳಿ ರವಿ ಹಾಗೂ ಯಸಳೂರು ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.
ಕೂಡಲೆ ಸ್ಥಳಕ್ಕೆ ಬಂದ ಯಸಳೂರು ಅರಣ್ಯ ಅಧಿಕಾರಿಗಳು ಹಾಗೂ ಉರಗತಜ್ಞರಾದ ಚoಗಡಿಹಳ್ಳಿ ರವಿ ರವರ ಸಹಾಯದಿಂದ ಸಂಜೆ ಸುಮಾರು 5.30 ರ ಸಮಯಕ್ಕೆ 5 ಅಡಿ ಗೋದಿ ನಾಗರಹವನ್ನು ಹಿಡಿದು ಸುರಕ್ಷಿತವಾಗಿ ಬಿಸ್ಲೆ ರಕ್ಷಿತ ಅರಣ್ಯಕ್ಕೆ ಬಿಡಲಾಯಿತು.
ಈ ರೀತಿ ನಾಗರಹಾವು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ, ಕಾಫಿ ತೋಟಕ್ಕೆ ಬರುವ ಕೂಲಿ ಕಾರ್ಮಿಕರಲ್ಲಿ ಭಯ ಉಂಟು ಮಾಡಿ, ಕಾಫಿ ತೋಟದ ಕೆಲಸಕ್ಕೆ ಹೋಗಲು ಸಮಸ್ಯೆಯಾಗುತ್ತಿದೆ.
ಇಂತಹ ಹಾವುಗಳು ಎಲ್ಲಿಂದ ಬರುತ್ತವೆ? ಯಾರದರು ತಂದು ಬಿಡುತ್ತಿದ್ದಾರೆಯೆ? ಎಂಬುದರ ಬಗ್ಗೆ ಅರಣ್ಯ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚಂಗಡಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇನಹಳ್ಳಿ ಮಧು ಅಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಯಸಳೂರು ಅರಣ್ಯ ಸಿಬ್ಬಂದಿಗಳಾದ ಪರಮೇಶ್, ಅಶೋಕ್ ಸೇರಿದಂತೆ ಗ್ರಾಮಸ್ಥರಾದ ಪವನ್, ರಾಕೇಶ್, ತೇಜು, ವೀರೇಶ್, ದುಶಾಂತ್ ಇದ್ದರು.
