ಆಲೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಕಷ್ಟು ಮಹಿಳೆಯರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈ ಯೋಜನೆಯು ಮಹಿಳೆಯರ ಸಬಲೀಕರಣದ ಜೊತೆಗೆ ಬಡ ಕುಟುಂಬಗಳಿಗೂ ಆರ್ಥಿಕ ಭದ್ರತೆ ಕಲ್ಪಿಸಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಸೋಮವಾರ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜ ಮತ್ತು ಕುಟುಂಬ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ನಂಬಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೆನ್ನೆಲುಬಾಗಿ ನಿಂತಿದೆ.ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲೆಯಲ್ಲಿ ಕಾರ್ಯಾರಂಭಿಸಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಪೂಜ್ಯರ ಮಾರ್ಗದರ್ಶನದಲ್ಲಿ ಸ್ವ ಸಹಾಯ ಸಂಘಗಳ ಮೂಲಕ ಹಲವಾರು ಮಂದಿ ಉತ್ತಮ ಬದುಕನ್ನು ಕಟ್ಟಿಕೊಂಡು ಆರ್ಥಿಕವಾಗಿ ಸಧೃಢರಾಗಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸದಸ್ಯರಿಗೆ ಆರ್ಥಿಕ ಸಹಕಾರ ನೀಡುವುದರ ಜೊತೆಗೆ ವ್ಯವಹಾರದ ಶಿಸ್ತು, ಸಂಸಾರ ನಿರ್ವಹಣೆ ಹಾಗೂ ಸಂಸ್ಕಾರಯುತ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತಿರುವ ಸಂಸ್ಥೆಯಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳು ಸಮಾಜದ ದುರ್ಬಲ ವರ್ಗದವರಿಗೆ ಆಶಾಕಿರಣವಾಗಿದೆ.ಯೋಜನೆ ವತಿಯಿಂದ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲು ಸಾಲ ಸೌಲಭ್ಯ ನೀಡದೆ, ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಿ ಕೃಷಿ ತರಬೇತಿ, ಪರಿಕರಗಳ ವಿತರಣೆ, ವಿದ್ಯಾರ್ಥಿ ವೇತನ, ಮದ್ಯಪಾನ ವರ್ಜನ ಶಿಬಿರ, ಪರಿಸರ ಕಾಳಜಿ, ಬೀಜ ಬಿತ್ತನೆ, ಬಡವರು ವಾಹನ ಖರೀದಿಸಲು ಸಾಲ ಸೌಲಭ್ಯ, ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ವಿತರಣೆ ಹೀಗೇ ಹತ್ತು ಹಲವು ಜನಪರ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಾ ಗ್ರಾಮೀಣ ಪ್ರದೇಶದ ಜನರಿಗೆ ಸಂಜೀವಿನಿಯಾಗಿದೆ.ಸರ್ಕಾರ ಮಾಡಬಹುದಾದ ಕೆಲಸವನ್ನು ಮಾಡುತ್ತಿರುವ ಸಂಸ್ಥೆ ಯಾವುದಾದರೂ ಇದ್ದರೆ ಅದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸುರೇಶ್ ಮೈಲಿ ಮಾತನಾಡಿ, ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಸಂಸ್ಥೆಯು ಮಹಿಳೆಯರಿಗೆ ಉನ್ನತ ಸಾಧನೆ ಮಾಡಲು ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಪಡೆಯಲು ಸುಲಭ ವ್ಯವಸ್ಥೆ ಇದೆ. ಮಹಿಳೆಯರು ಶಿಕ್ಷಣ ಪಡೆದು, ಸ್ವ-ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿದೆ. ಸಂಸ್ಕೃತಿ, ಸಂಸ್ಕಾರ ಉಳಿಸಲು ಮಹಿಳೆಯರ ಪಾತ್ರ ಮಹತ್ವದ್ದು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನುಹಿರಿಯ ಪತ್ರಕರ್ತರಾದ ಹರೀಶ್ ವಹಿಸಿದ್ದರು.

ಈ ಸಂಧರ್ಭದಲ್ಲಿ ತಾಲ್ಲೂಕು ಅರೋಗ್ಯಾಧಿಕಾರಿ ನಿಸಾರ್ ಫಾತಿಮ, ಜಿಲ್ಲಾ ಜನ ಜಾಗೃತಿ ಸದಸ್ಯ ಮೋಹನ್ ಕುಮಾರ್, ರಾಜ ಶೇಖರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *