ಬೆಳಗಾವಿ : ಸರ್ಕಾರಿ ಕಾರ್ಯಕ್ರಮಗಳಲ್ಲಿ ಈವರೆಗೆ ಸ್ಥಳೀಯ ಶಾಸಕರಿಗೆ ಅಧ್ಯಕ್ಷತೆ ನೀಡುವ ಪದ್ಧತಿ ನಡೆದುಬರುತ್ತಿದ್ದು, ಇತ್ತೀಚೆಗೆ ಸರ್ಕಾರದ ನಿರ್ದೇಶನದಂತೆ ಶಾಸಕರನ್ನು ಕೇವಲ ಮುಖ್ಯ ಅತಿಥಿಗಳಾಗಿ ನಮೂದಿಸಲಾಗುತ್ತಿರುವುದರ ಬಗ್ಗೆ ಸಕಲೇಶಪುರ–ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ಸರ್ಕಾರದ ಗಮನ ಸೆಳೆದಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ಆಯಾ ಕ್ಷೇತ್ರಗಳಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಕ್ಷೇತ್ರದ ಶಾಸಕರೇ ಅಧ್ಯಕ್ಷತೆ ವಹಿಸಬೇಕು ಎಂಬುದು ಪ್ರಜಾಪ್ರಭುತ್ವದ ಸಂಪ್ರದಾಯ ಹಾಗೂ ಜನಪ್ರತಿನಿಧಿಗಳ ಗೌರವದ ದೃಷ್ಟಿಯಿಂದ ಅತ್ಯಂತ ಮಹತ್ವದ್ದೆಂದು ತಿಳಿಸಿದರು.

ಸ್ಥಳೀಯ ಶಾಸಕರು ಜನರಿಂದ ನೇರವಾಗಿ ಆಯ್ಕೆಯಾಗಿರುವ ಪ್ರತಿನಿಧಿಗಳಾಗಿರುವುದರಿಂದ, ಅವರ ಕ್ಷೇತ್ರದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಿಗೆ ಅಧ್ಯಕ್ಷತೆ ನೀಡುವುದು ಯುಕ್ತಿಯುಕ್ತವಾಗಿದ್ದು, ಇದರಿಂದ ಆಡಳಿತ ಮತ್ತು ಜನರ ನಡುವಿನ ಸಂಪರ್ಕ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಶಾಸಕರೇ ಅಧ್ಯಕ್ಷರಾಗಿರುತ್ತಾರೆ ಆದರೆ ಡಿ. 06 ರಂದು ಹಾಸನದಲ್ಲಿ ನೆಡೆದ ಸರ್ಕಾರಿ ಸೇವೆಗಳ ಸಮರ್ಪಣ ಸಮಾವೇಶದಲ್ಲಿ ಶಾಸಕರನ್ನು ಮುಖ್ಯ ಅತಿಥಿಗಳ ಎಂದು ನಮೂದಿಸಿರುವುದು ಬೇಸರದ ಸಂಗತಿಯಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.

ಈ ಹಿಂದಿನ ಪದ್ಧತಿಯನ್ನು , ಕ್ಷೇತ್ರದ ಶಾಸಕರಿಗೆ ಅಧ್ಯಕ್ಷತೆ ನೀಡುವಂತೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಶಾಸಕ ಸಿಮೆಂಟ್ ಮಂಜು ಅವರು ಸದನದ ಮೂಲಕ ಮನವಿ ಮಾಡಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಸಿದ ಸಭಾಪತಿ ಯು.ಟಿ ಖಾದರ್ ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ನಾಳೆ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾನೂನು ಸಚಿವರು ಸದನದಲ್ಲಿ ಉತ್ತರದಲ್ಲಿದ್ದಾರೆ. ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಗೌರವ ಹಾಗೂ ಸವಲತ್ತುಗಳು ಸಂವಿಧಾನಬದ್ಧವಾದದ್ದು ಅದನ್ನು ಸರ್ಕಾರ ನೀಡುವುದು ಜವಾಬ್ದಾರಿಯಾಗಿದೆ ಎಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *