ಸಕಲೇಶಪುರ:ಡಿ, 28: ನಗರದ ಇಮೇಜಿನ್ ಚಿತ್ರಕಲಾ ಶಾಲೆ ವತಿಯಿಂದ ಚಿಣ್ಣರ ಚಿತ್ತಾರ 2025–26ನೇ ಸಾಲಿನ ಜಿಲ್ಲಾ ಮಟ್ಟದ ಚಿತ್ರಕಲೆ ಸ್ಪರ್ಧೆ ಹಾಗೂ ಚಿತ್ರಕಲಾ ಕಾರ್ಯಾಗಾರವು ಭಾನುವಾರ ಅಂಬೇಡ್ಕರ್ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.

ನಗರ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಸ್ಪರ್ಧೆಯಲ್ಲಿ ಸಕಲೇಶಪುರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಅನೇಕ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ಸ್ಪರ್ಧೆಯನ್ನು ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗಿತ್ತು.1 ರಿಂದ 2ನೇ ತರಗತಿ, 3 ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆ ನಡೆಸಲಾಯಿತು.5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಜಾನಪದ ಶೈಲಿಯ ಚಿತ್ರಕಲೆ,8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಲಿ ಚಿತ್ರಕಲೆ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.

1ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಬಣ್ಣ ಬಳಕೆಗೆ ಅವಕಾಶ ನೀಡಲಾಗಿದ್ದು, 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಜಲವರ್ಣ, ಅಕ್ರಿಲಿಕ್, ಪೋಸ್ಟರ್ ಕಲರ್ ಹಾಗೂ ಆಯಿಲ್ ಪೇಸ್ಟಲ್ ಬಳಕೆಗೆ ಅವಕಾಶ ನೀಡಲಾಗಿತ್ತು.ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಪದಕ ನೀಡಿ ಗೌರವಿಸಲಾಯಿತು.

ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.

ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಹಾರವನ್ನು ಕೂಡ ವ್ಯವಸ್ಥೆ ಮಾಡಲಾಗಿತ್ತು.

ಮಧ್ಯಾಹ್ನ ಅನುಭವಿ ಚಿತ್ರಕಲಾವಿದರಿಂದ ಚಿತ್ರಕಲಾ ಕಾರ್ಯಾಗಾರ ನಡೆಸಲಾಗಿದ್ದು, ಚಿತ್ರಕಲೆಯ ಸೂಕ್ಷ್ಮತೆ, ಬಣ್ಣಗಳ ಬಳಕೆ, ಕಲ್ಪನೆಯ ಅಭಿವ್ಯಕ್ತಿ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕ ಹಾಗೂ ಕಲಾವಿದ ಲೋಕೇಶ್ ಮಳಲಿ, ಪುರಸಭೆ ಮಾಜಿ ಅಧ್ಯಕ್ಷ ಇಬ್ರಾಹಿಂ ಯಾದ್‌ಗಾರ್, ಕಾಂಗ್ರೆಸ್ ಪಕ್ಷದ ಮುಖಂಡ ಡಿ.ಸಿ. ಸಣ್ಣಸ್ವಾಮಿ, ಹಿರಿಯ ಪತ್ರಕರ್ತ ಮಲ್ನಾಡ್ ಮೆಹಬೂಬ್, ಯಡೆಹಳ್ಳಿ ಜಗದೀಶ್, ವೆಂಕಟೇಶ್, ಬೈರಪ್ಪ, ಬಾಳ್ಳುಪೇಟೆ ಸಿದ್ದಣಯ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಉಮಾ ದೇವಿ ಮಾಡಿದರು.

ಕಾರ್ಯಕ್ರಮದ ಯಶಸ್ಸಿಗೆ ಚಿತ್ರಕಲಾ ಶಿಕ್ಷಕರು, ಪೋಷಕರು ಹಾಗೂ ಸ್ವಯಂಸೇವಕರು ಸಹಕಾರ ನೀಡಿದರು. ಕಾರ್ಯಕ್ರಮವನ್ನು ಸಂಯೋಜಿಸಿದ ಲೋಕೇಶ್ ಮಳಲಿ ಅವರು ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *