
ಸಕಲೇಶಪುರ:- ವಸತಿ ಶಾಲೆಗಳು ವಿದ್ಯಾರ್ಥಿಗಳಿಗೆ ಉತ್ತಮವಾದ ಸಂಸ್ಕಾರವನ್ನು ಕಲಿಸುತ್ತಿವೆ. ಇದರಿಂದ ಅವರ ಭವಿಷ್ಯದ ಜೀವನ ಉತ್ತಮವಾಗಿರುತ್ತದೆ ಎಂದು ಶಾಸಕ ಸಿಮೆಂಟ್ ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬ್ಯಾಕರವಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರದಂದು ನೆಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಇತ್ತೀಚಿನ ದಿನದಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ಜನರಲ್ಲಿ ವಿದ್ಯೆಯ ಜೊತೆಗೆ ಸಂಸ್ಕಾರ ಇಲ್ಲದೇ ಇರುವುದು. ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಕಲಿಯಬೇಕು. ಇಂತಹ ವಸತಿ ಶಾಲೆಗಳು ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುತ್ತಾ ಬಂದಿವೆ. ವಿದ್ಯಾರ್ಥಿಗಳು ತಂದೆ ತಾಯಿ ಕನಸನ್ನು ನನಸು ಮಾಡುವ ಗುರಿಯನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು. ನಂತರ ವಿದ್ಯೆಯನ್ನು ಕೊಟ್ಟ ಗುರುವನ್ನು ಸದಾ ಕಾಲ ನೆನೆದು ಜೀವನ ನೆಡೆಸಬೇಕು.ತಮ್ಮ ವಿದ್ಯಾರ್ಥಿಗಳು ತಮಗಿಂತ ಹೆಚ್ಚಿನ ಉನ್ನತ ಹುದ್ದೆಗೆ ಹೋಗಿ ಸೇವೆ ಸಲ್ಲಿಸುತ್ತಿದ್ದರೆ ಅದು ಕಲಿಸಿದ ಶಿಕ್ಷಕರಿಗೆ ಹೆಮ್ಮೆಯ ವಿಷಯವಾಗಿರುತ್ತದೆ ಎಂದರು.
ವಿದ್ಯಾರ್ಥಿಗಳು ತಮ್ಮ ಹಿತ ಶಕ್ತಿಗಷ್ಟೇ ಶಿಕ್ಷಣ ಪಡೆಯದೆ ಸಮಾಜಕ್ಕೆ ಮಾದರಿಯಾಗಿ ಕೆಲಸ ಮಾಡುವಂತಹ ಮನಸ್ಸಿನಿಂದ ಶಿಕ್ಷಣ ಪಡೆಯಬೇಕು. ಆಗ ಜೀವನ ಸಾರ್ಥಕವಾಗುತ್ತದೆ.ಪ್ರತಿಯೊಬ್ಬ ವಿದ್ಯಾರ್ಥಿಗೂ ಸಂವಿಧಾನ ಶಿಲ್ಪಿ ಡಾಕ್ಟರ್ ಅಂಬೇಡ್ಕರ್ ಜೀವನ ದಾರಿದೀಪವಾಗಬೇಕು.ಅವರು ತಾವು ಕಲಿತ ವಿದ್ಯೆಯನ್ನ ತಮ್ಮ ಜೀವನೋಪಾಯಕ್ಕಾಗಿ ಮಾತ್ರ ಮಿಸಲಿಡದೆ ತಾನು ಅನುಭವಿಸಿದ ಕಷ್ಟ ನೋವುಗಳನ್ನು ದೇಶದ ಜನರು ಅನುಭವಿಸಬಾರದೆಂದು ದೇಶದ ಜನರ ಸಮಾನತೆಯ ಅಭಿವೃದ್ಧಿಗಾಗಿ ಮುಡಿಪಾಗಿಟ್ಟರು. ಪ್ರತಿಯೊಬ್ಬ ಮಹಿಳೆಯರು ಅಂಬೇಡ್ಕರ್ ಫೋಟೋವನ್ನು ಪ್ರತಿನಿತ್ಯ ಪೂಜೆ ಮಾಡಬೇಕು. ಅವರು ಕೊಟ್ಟಂತಹ ಹಕ್ಕುಗಳಿಂದ ಇವತ್ತು ಮಹಿಳೆಯರಿಗೆ ಸಮಾಜದಲ್ಲಿ ಎಲ್ಲ ರಂಗದಲ್ಲೂ ಸಮಾನತೆ ಸಿಗುವಂತಾಗಿದೆ ಎಂದು ಹೇಳಿದರು.ದೇಶದ ಆರ್ಥಿಕತೆಗೆ ಪೆಟ್ಟು ನೀಡಲು ಕಾಣದ ಕೈಗಳು ಯುವಕರನ್ನು ಮಾದಕ ವ್ಯಸನಿ ಬಲೆಗೆ ಬೀಳಿಸುತ್ತಿದ್ದಾರೆ. ಇದರಿಂದ ಯುವಕರು ಜಾಗೃತರಾಗಿರಬೇಕು ಎಂದು ಕರೆ ನೀಡಿದರು.
ಸತತವಾಗಿ 6 ವರ್ಷಗಳಿಂದ ಶೇಕಡ 100ರಷ್ಟು ಫಲಿತಾಂಶವನ್ನು ಕೊಡುತ್ತಿರುವ ಈ ಬ್ಯಾಕರವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಗ್ಗೆ ಹೆಮ್ಮೆ ಇದೆ. ಮುಂದಿನ ದಿನದಲ್ಲಿ 2 ಕೋಟಿ ಅನುದಾನದಲ್ಲಿ ಈ ಶಾಲೆಯ ಅಭಿವೃದ್ಧಿಗೆ ಗುದ್ದಲಿ ಪೂಜೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಎನ್ ಡಿ ಆರ್ ಕೆ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಮೋಹನ್ ಕುಮಾರ್ ಶಾಲಾ ವಾರ್ಷಿಕ ಸಂಚಿಕೆ “ಚಿಗುರು” ಲೋಕಾರ್ಪಣೆ ಮಾಡಿ ಮಾತನಾಡಿದರು ಈ ಚಿಗುರು ಸಂಚಿಕೆಯಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಂಡಿದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಎಲ್ಲಾ ರಂಗದಲ್ಲೂ ತಮ್ಮ ಪ್ರತಿಭೆಯನ್ನು ಹೊರಹಾಕಲು ಶಿಕ್ಷಕ ವರ್ಗದವರು ಮುಖ್ಯ ಕಾರಣ ವಹಿಸಿದ್ದಾರೆ. ಪೋಷಕರ ಬದಲು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಶಿಕ್ಷಕರು ವಹಿಸಿಕೊಂಡು ಅವರ ವಿದ್ಯಾರ್ಥಿಯ ಕನಸಿನ ಚಿಗುರಿಗೆ ನೀರಿರದಿದ್ದಾರೆ.ತಂದೆ ತಾಯಿಗಳು ತಮ್ಮ ಮಕ್ಕಳಿಗೆ ತಮ್ಮ ಹಾಗೂ ತಮ್ಮ ಹಿಂದಿನ ತಲೆಮಾರಿನವರ ಕಷ್ಟದ ಜೀವನವನ್ನು ತಿಳಿಸಿ ಹೇಳುವ ಮೂಲಕ ಜೀವನದ ಮೌಲ್ಯವನ್ನು ಮಕ್ಕಳಿಗೆ ಕಲಿಸಬೇಕು. ಸ್ವಾ ಅನುಭವಗಳು ಮಕ್ಕಳಲ್ಲಿ ದೀರ್ಘ ಕಾಲ ಉಳಿಯುತ್ತದೆ.ಕಷ್ಟದಲ್ಲಿ ಕಲಿತ ವಿದ್ಯೆ ಜೀವನದಲ್ಲಿ ಒಳ್ಳೆ ದಾರಿ ಮಾಡಿಕೊಡುತ್ತದೆ.ಜನಪ್ರತಿನಿಧಿಗಳು ಸಾರ್ವಜನಿಕ ಸಭೆಗಳಿಗಿಂತ ಇತರಹದ ಶೈಕ್ಷಣಿಕ ಸಭೆಯಲ್ಲಿ ಪಾಲ್ಗೊಂಡರೆ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗುತ್ತದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮುಂಚೆ ಶಾಲೆಯ ಶಿಕ್ಷಕರಾಗಿದ್ದ ದಿವಂಗತ ಫರ್ಹನಾಜ್ ರ ಹೆಸರಿನಲ್ಲಿ ನವೀಕೃತ ಭೋಧನಾ ಕೊಠಡಿ ಮತ್ತು ನವೀಕೃತ ಶುಶ್ರೂಷಕ ಕೊಠಡಿಯ ಉದ್ಘಾಟನೆ ಶಾಸಕರು ನೆರವೇರಿಸಿದರು.
ಸಂಜೆ ವಿದ್ಯಾರ್ಥಿಗಳಿಂದ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾದವು.ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲರಾದ ಶತೇಂದ್ರ ಕುಮಾರ್, ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಭಾಗ್ಯಮ್ಮ, ಸದಸ್ಯರಾದ ಚನ್ನಯ್ಯ, ಪ್ರಾಂಶುಪಾಲರಾದ ಡಾಕ್ಟರ್ ಮಾಲಿನಿ, ಪುರಸಭೆ ಮಾಜಿ ಸದಸ್ಯರಾದ ಪ್ರದೀಪ್, ಕುಮಾರ್ ಸೇರಿದಂತೆ ಮುಂತಾದವರು ಇದ್ದರು
