ಸಕಲೇಶಪುರ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಸನ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಸಕಲೇಶಪುರದ ಕೊಲ್ಲಹಳ್ಳಿ ಸಲೀಂ ಕೆ.ಎ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಸೂಚನೆಯ ಮೇರೆಗೆ ಈ ನೇಮಕಾತಿ ಜಾರಿಗೊಳಿಸಲಾಗಿದ್ದು, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಅವರು ದಿನಾಂಕ ಜನವರಿ 1 ರಂದು ಅಧಿಕೃತ ನೇಮಕಾತಿ ಆದೇಶ ಹೊರಡಿಸಿದ್ದಾರೆ.

ಸಲೀಂ ಕೆ.ಎ ಅವರು ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡಿದ್ದಾರೆ. ಪಕ್ಷ ಸಂಘಟನೆ, ಸಾರ್ವಜನಿಕ ಸೇವೆ ಹಾಗೂ ಹೋರಾಟಗಳಲ್ಲಿ ಮುಂಚೂಣಿಯ ನಾಯಕ.

ಬೂತ್ ಮಟ್ಟದ ಕಾರ್ಯಕರ್ತರ ಒಗ್ಗಟ್ಟು, ಪಕ್ಷದ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಚುನಾವಣಾ ಸಂದರ್ಭಗಳಲ್ಲಿ ಸಂಘಟಿತ ಕಾರ್ಯಚಟುವಟಿಕೆಗಳಲ್ಲಿ ಅವರ ಸೇವೆ ಗಮನಾರ್ಹವಾಗಿದೆ.ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸಿರುವ ಇವರು ಕೊಲ್ಲಹಳ್ಳಿ ಪ್ರದೇಶದಲ್ಲಿ ವಸತಿ ಹೀನ ಬಡ ಜನರಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ರಾಜ್ಯಮಟ್ಟದ ಪ್ರತಿಭಟನೆಗಳನ್ನು ಸಂಘಟಿಸಿ ಗಮನ ಸೆಳೆದಿದ್ದರು.

ಈ ಹೋರಾಟವು ಬಡವರ ವಸತಿ ಹಕ್ಕಿನ ಪ್ರಶ್ನೆಯನ್ನು ರಾಜ್ಯಮಟ್ಟದಲ್ಲಿ ಚರ್ಚೆಗೆ ತಂದಿತ್ತು.ಈ ಹಿಂದೆ ಮಳಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಭಾರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ರೈತರ ಹಿತ, ಕೃಷಿ ಉತ್ಪನ್ನಗಳ ನ್ಯಾಯಸಮ್ಮತ ಬೆಲೆ, ಮಾರುಕಟ್ಟೆ ವ್ಯವಸ್ಥೆ ಸುಧಾರಣೆ ಕುರಿತಂತೆ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ಸಾರ್ವಜನಿಕ ಸೇವೆಯ ಭಾಗವಾಗಿ ರೈತರು, ಕಾರ್ಮಿಕರು, ಅಲ್ಪಸಂಖ್ಯಾತರು, ಯುವಕರು ಹಾಗೂ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸದಾ ಚಟುವಟಿಕೆಯಿಂದ ತೊಡಗಿಸಿಕೊಂಡಿದ್ದಾರೆ.

ಈ ಹಿಂದೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ,ಪ್ರಸ್ತುತ ಅವರು ಕೆಪಿಸಿಸಿ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ಸಿದ್ಧಾಂತಗಳು, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಜನಸಾಮಾನ್ಯರ ನಡುವೆ ತಲುಪಿಸುವಲ್ಲಿ ಸಕ್ರಿಯರಾಗಿದ್ದಾರೆ.

ಹಾಸನ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಅವರ ನೇಮಕ ಪಕ್ಷ ಸಂಘಟನೆಗೆ ಹೊಸ ಚೈತನ್ಯ ನೀಡಲಿದೆ ಎಂಬ ವಿಶ್ವಾಸವನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *