ಸಕಲೇಶಪುರ : ಬೆಳೆಗಾರರ ವಿವಿಧ ಸಮಸ್ಯೆಗಳ ಕುರಿತು ಪೊಲೀಸ್ ಇಲಾಖೆ ಹಾಗೂ ಕಾಫಿ ಬೆಳೆಗಾರರ ಸಂಘಟನೆಗಳ ಸಂಯುಕ್ತ ಸಭೆ ಗುರುವಾರ ನಡೆಯಿತು.

ತಾಲ್ಲೂಕಿನ ಬಾಳ್ಳುಪೇಟೆಯಲ್ಲಿರುವ ಬೆಳಗೋಡು ಹೋಬಳಿ ಕಾಫಿ ಬೆಳೆಗಾರರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೆಳೆಗಾರರು ತಮ್ಮ ಸಮಸ್ಯೆಗಳ ಕುರಿತು ಪೊಲೀಸ್ ಅಧಿಕಾರಿಗಳ ಗಮನ ಸೆಳೆದರು.

ಈ ಸಂದರ್ಭದಲ್ಲಿ ಮಾತನಾಡಿದ ಕೃಷಿಕ ಹಾಗೂ ಹೋರಾಟಗಾರ ಯಡೆಹಳ್ಳಿ ಮಂಜುನಾಥ್, ಬೆಳೆಗಾರರಿಗೆ ಕಾಡಾನೆ ಹಾವಳಿ ತೀವ್ರವಾಗಿದ್ದು, ಕಾಡಾನೆ ದಾಳಿಯಿಂದ ಸಂಕಷ್ಟದಲ್ಲಿರುವ ರೈತರ ಪರವಾಗಿ ಪ್ರತಿಭಟನೆ ನಡೆಸಿದಾಗ ಪೊಲೀಸರು ವಿನಾಕಾರಣ ಹಾಗೂ ದುರುದ್ದೇಶಪೂರಿತವಾಗಿ ಪ್ರಕರಣ ದಾಖಲಿಸುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.

ಅರ್ಜುನ ಆನೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಅದರ ಪರವಾಗಿ ನಡೆದ ಪ್ರತಿಭಟನೆಯ ಕಾರಣದಿಂದ ಎರಡು ವರ್ಷಗಳ ಬಳಿಕ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿರುವುದು ಹೋರಾಟ ಮನೋಭಾವವನ್ನು ಕುಗ್ಗಿಸುವ ಕ್ರಮವಾಗಿದೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಈ ರೀತಿಯ ಸುಳ್ಳು ಪ್ರಕರಣಗಳನ್ನು ದಾಖಲಿಸುವುದನ್ನು ಪೊಲೀಸ್ ಇಲಾಖೆ ಕೈಬಿಡಬೇಕೆಂದು ಒತ್ತಾಯಿಸಿದರು. ಜೊತೆಗೆ ಮಲೆನಾಡು ಪ್ರದೇಶದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗಿದ್ದು, ಅವರಿಂದ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಪೂರೈಕೆ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಅಕ್ರಮ ವಲಸಿಗರನ್ನು ಗುರುತಿಸಿ ಅವರ ದೇಶಗಳಿಗೆ ವಾಪಸ್ ಕಳುಹಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್‌ಪಿ ಮಾಲತೇಶ್, ತಮ್ಮ ವೃತ್ತಿ ಜೀವನದಲ್ಲಿ ವಿವಿಧ ರೀತಿಯ ಪ್ರಕರಣಗಳನ್ನು ಭೇದಿಸಿದ ಅನುಭವವಿದ್ದು, ಹೋರಾಟಗಾರರ ವಿರುದ್ಧ ವಿನಾಕಾರಣ ಸುಳ್ಳು ಪ್ರಕರಣ ದಾಖಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜನರ ಸುರಕ್ಷತೆಯೇ ಪೊಲೀಸ್ ಇಲಾಖೆಯ ಮೊದಲ ಆದ್ಯತೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿರುವ ಬಗ್ಗೆ ಅಂಕಿ-ಅಂಶಗಳೊಂದಿಗೆ ಸಭೆಯ ಗಮನ ಸೆಳೆದರು.ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕಾಫಿ ಬೆಳೆಗಾರರು ತಮ್ಮ ತೋಟಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದರು.

ಗಾಂಜಾ ಸೇವನೆ ಹಾಗೂ ಮಾರಾಟಕ್ಕೆ ಸಂಬಂಧಿಸಿದ ಮಾಹಿತಿ ಲಭ್ಯವಾದಲ್ಲಿ ತಕ್ಷಣ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಹೇಳಿದರು.

ಕಾಡಾನೆ ಹಾವಳಿ ಹಾಗೂ ಇತರೆ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ವಿಶೇಷ ಯೋಜನೆ ರೂಪಿಸಲಾಗಿದ್ದು, ಆಯಾಕಟ್ಟಿನ ಹಳ್ಳಿಗಳಲ್ಲಿ ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರು ಸ್ಥಳೀಯವಾಗಿ ವಾಟ್ಸಪ್ ಗುಂಪುಗಳನ್ನು ರಚಿಸಿ ಜನರಿಗೆ ಮಾಹಿತಿ ನೀಡಲಿದ್ದಾರೆ. ಕಳ್ಳತನ ಪ್ರಕರಣಗಳ ಪತ್ತೆಗೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲಾಗುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಡಿವೈಎಸ್‌ಪಿ ತಿಳಿಸಿದರು.

ಸಭೆಯಲ್ಲಿ ಬೆಳಗೋಡು ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ರಾಮಕೃಷ್ಣ, ವೃತ್ತ ನಿರೀಕ್ಷಕ ಪಾಟೀಲ್, ಪಿಎಸ್ಐ ಪ್ರಸನ್ನ, ಸಂಘದ ಕಾರ್ಯದರ್ಶಿ ಹೆಗ್ಗೋವೇ ಪುಟ್ಟರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *