
ಸಕಲೇಶಪುರ : ಶಾಸಕ ಸಿಮೆಂಟ್ ಮಂಜು ಅವರ ಆಡಳಿತ ವೈಖರಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದ ಹಲವು ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು.
ತಾಲ್ಲೂಕಿನ ಬ್ಯಾಕರವಳ್ಳಿಯ ವೃತ್ತದಲ್ಲಿ ನಡೆದ ಸಮಾರಂಭದಲ್ಲಿ, ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚೆನ್ನಯ್ಯ ಅವರ ಪುತ್ರರಾದ ದರ್ಶನ್ ಹಾಗೂ ಮಂಜುನಾಥ್, ಮಾಜಿ ಸದಸ್ಯ ಪುಟ್ಟರಾಜು, ಹರಗರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶ್ರೀ ನಾಗೇಶ್ ಸೇರಿದಂತೆ ಹಲವು ಯುವಕರು ಬಿಜೆಪಿ ಸೇರ್ಪಡೆಯಾದರು.
ಈ ವೇಳೆ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಸಾಮಾನ್ಯ ಕಾರ್ಯಕರ್ತರ ಪಕ್ಷವಾಗಿದೆ. ಸಾಮಾನ್ಯ ಕಾರ್ಯಕರ್ತರಾಗಿದ್ದ 40 ವರ್ಷದ ನಿತಿನ್ ನಬಿನ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿರುವುದೇ ಇದಕ್ಕೆ ಸ್ಪಷ್ಟ ಉದಾಹರಣೆ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ನಿತಿನ್ ನಬಿನ್ ಅವರನ್ನು ಶ್ಲಾಘಿಸಿದ್ದು, ‘ಪಕ್ಷದ ವಿಚಾರಕ್ಕೆ ಬಂದರೆ ನಿತಿನ್ ನಬಿನ್ ಬಾಸ್, ನಾನು ಪಕ್ಷದ ಕಾರ್ಯಕರ್ತ’ ಎಂದು ಹೇಳಿದ್ದಾರೆ.
ಇದು ಬಿಜೆಪಿಯೊಳಗಿನ ನಿಜವಾದ ಪ್ರಜಾಪ್ರಭುತ್ವವನ್ನು ತೋರಿಸುತ್ತದೆ ಎಂದರು.ನಮ್ಮ ಮೂಲ ಉದ್ದೇಶ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿ. ಎಲ್ಲಾ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವುದರ ಜೊತೆಗೆ ಎಲ್ಲಾ ಜನಾಂಗಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ನಮ್ಮ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಬ್ಯಾಕರವಳ್ಳಿ ಜಯಣ್ಣ, ಬ್ಯಾಕರವಳ್ಳಿ ಶಕ್ತಿ ಕೇಂದ್ರದ ಅಧ್ಯಕ್ಷ ಕಾರ್ತಿಕ್, ತಾಲ್ಲೂಕು ಮಂಡಲ ಯುವಮೋರ್ಚಾ ಮಾಜಿ ಅಧ್ಯಕ್ಷ ಜಿತು ಶುಕ್ರವಾಸಂತೆ, ಮುಖಂಡರಾದ ಇಂದನ್, ಬ್ಯಾಕರವಳ್ಳಿ ಬಸವರಾಜು, ಕುಣಿಗಲ್ ಪ್ರಸನ್ನ ಸೇರಿದಂತೆ ಇನ್ನಿತರ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
