
ಸಕಲೇಶಪುರ : ಮಲೆನಾಡು ಭಾಗದ ರಸ್ತೆ ಅಭಿವೃದ್ಧಿಗೆ ಸರ್ಕಾರವು ವಿಶೇಷ ಅನುದಾನ ನೀಡಬೇಕು ಎಂದು ಶಾಸಕ ಸಿಮೆಂಟ್ ಮಂಜುನಾಥ್ ಒತ್ತಾಯಿಸಿದರು.
ತಾಲೂಕಿನ ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದನಾಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ವೆಂಕಟಹಳ್ಳಿ–ಮದನಾಪುರ–ಹಾದಿಗೆ–ಹಾನಾಬಾಳು ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಗೆ ಎತ್ತಿನಹೊಳೆ ಯೋಜನೆಯಡಿ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.
ತಾವು ಶಾಸಕನಾದ ಬಳಿಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಎತ್ತಿನಹೊಳೆ ಯೋಜನೆ ಅಡಿಯಲ್ಲಿ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು.
ಈ ಸಂಬಂಧ ಈಗಾಗಲೇ 72 ಕೋಟಿ ರೂ. ಬಿಡುಗಡೆಗೊಂಡಿದೆ ಎಂದು ಹೇಳಿದರು.ತಾಲೂಕಿನ ಪರಿಸರಕ್ಕೆ ಎತ್ತಿನಹೊಳೆ ಯೋಜನೆಯಿಂದ ಹಾನಿಯಾಗಿದ್ದರೂ ಸಹ ನಮ್ಮ ಕ್ಷೇತ್ರದ ಜನರು ಬಯಲು ಪ್ರದೇಶದ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗಾಗಿ ಸಹಕಾರ ನೀಡಿದ್ದಾರೆ. ಏಳು ಜಿಲ್ಲೆಗಳ ಸುಮಾರು 70 ಲಕ್ಷ ಜನರಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ ಎಂದು ಹೇಳಿದರು.
ಶಾಸಕನಾದ ನಂತರ ಹಾನುಬಾಳು ಜಿ.ಪಂ. ವ್ಯಾಪ್ತಿಯ ಕ್ಯಾಮನಹಳ್ಳಿ, ದೇವಾಲದಕೆರೆ, ಹಾನುಬಾಳು ಹಾಗೂ ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಅಧಿಕಾರ ಸಿಕ್ಕ ಸಂದರ್ಭದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕ್ಯಾಮನಹಳ್ಳಿ ರಾಜ್‌ಕುಮಾರ್, ಜಂಬರಡಿ ಲೋಹಿತ್, ಅಗ್ನಿ ಸೋಮಶೇಖರ್, ಗುತ್ತಿಗೆದಾರ ರಾಜೀವ್ ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
