ಸಕಲೇಶಪುರ : ಕೃಷಿ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನಗಳ ಅಳವಡಿಕೆ, ಸಮರ್ಪಕ ತರಬೇತಿ ಮತ್ತು ರೈತರ ಆದಾಯ ವೃದ್ಧಿಗೆ ಕೇಂದ್ರ ಸರ್ಕಾರದ ATMA (Agricultural Technology Management Agency) ಯೋಜನೆ ಪರಿಣಾಮಕಾರಿ ಪಾತ್ರ ವಹಿಸುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಮಂಗಳವಾರ ನಿರ್ದೇಶಕರ ಕಚೇರಿ ಆವರಣದಲ್ಲಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಆತ್ಮ ಯೋಜನೆಯಡಿ ಆಯೋಜಿಸಿದ್ದ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯೋಜನೆಯು ರೈತರಿಗೆ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ವಿಧಾನಗಳು, ಕೃಷಿ ಯಾಂತ್ರೀಕರಣ, ಸಾವಯವ ಬೇಸಾಯ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಮೂಲಕ ಸ್ವಾವಲಂಬಿ ಕೃಷಿಗೆ ಉತ್ತೇಜನ ನೀಡುತ್ತದೆ ಎಂದು ತಿಳಿಸಿದರು.

ಇದರಡಿ ನೂತನ ಕೃಷಿ ತಂತ್ರಜ್ಞಾನಗಳು ಹಾಗೂ ವೈಜ್ಞಾನಿಕ ಬೇಸಾಯ ಪದ್ಧತಿಗಳ ಕುರಿತು ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳನ್ನು ನಡೆಸುವ ಮೂಲಕ ರೈತರಿಗೆ ತಾಂತ್ರಿಕ ಜ್ಞಾನ ಒದಗಿಸಲಾಗುತ್ತಿದೆ ಎಂದರು.ರೈತರ ಗುಂಪುಗಳನ್ನು (FIGs) ಬಲಪಡಿಸುವುದು, ಮಾರುಕಟ್ಟೆ ಸಂಪರ್ಕವನ್ನು ಸುಧಾರಿಸುವುದು ಹಾಗೂ ಜಿಲ್ಲಾ ಮಟ್ಟದಲ್ಲಿ ಕೃಷಿ ಸಂಶೋಧನೆ ಮತ್ತು ರೈತರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದೇ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಮಣ್ಣಿನ ಆರೋಗ್ಯ ಸುಧಾರಣೆ ಮತ್ತು ಸಾವಯವ ಗೊಬ್ಬರಗಳ ಬಳಕೆಯನ್ನು ಪ್ರೋತ್ಸಾಹಿಸುವ ಮೂಲಕ ಸುಸ್ಥಿರ ಹಾಗೂ ಸಾವಯವ ಕೃಷಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.ರೈತರು ವೈಜ್ಞಾನಿಕ ಭೂ ತಾರಸಿ ಪದ್ಧತಿ ಅನುಸರಿಸುವುದರ ಜೊತೆಗೆ ಟೀ, ರಬ್ಬರ್ ಹಾಗೂ ಜೇನು ಕೃಷಿಯಂತಹ ಪರ್ಯಾಯ ಬೆಳೆಗಳತ್ತ ಹೆಚ್ಚಿನ ಒಲವು ತೋರಬೇಕು. ಇದರಿಂದ ಅವರ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ 25 ಜನ ಫಲಾನುಭವಿಗಳಿಗೆ ಜಾಯಿಕಾಯಿ ಸಸಿಗಳನ್ನು ವಿತರಿಸಲಾಯಿತು.

ಜಾಯಿಕಾಯಿ ಬೆಳೆಯುವ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಿರುವ ಯೋಜನೆ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *