
ಸಕಲೇಶಪುರ : ತಾಲೂಕಿನ ಗುಂಡ್ಯ ಸಮೀಪ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಧರ್ಮದಕಳ ನಿವಾಸಿಗಳಾದ ಚಂದ್ರಶೇಖರ ಗೌಡ, ಶ್ರೀಧರ್ ಮರಕಡ ಹಾಗೂ ಜನಾರ್ದನ ಕೆರಿಮಾರ್ ಎಂದು ಗುರುತಿಸಲಾಗಿದೆ. ಸುರೇಶ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಪರಸ್ಪರ ಸಂಬಂಧಿಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಇವರು ಸಕಲೇಶಪುರದಲ್ಲಿ ನಡೆದ ಮದುವೆ ಸಮಾರಂಭಕ್ಕೆ ತೆರಳಿ ಕೊಕ್ಕಡದತ್ತ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಧರ್ಮಸ್ಥಳದಿಂದ ಮಧ್ಯಾಹ್ನ ಸುಮಾರು 2.30ಕ್ಕೆ ಹೊರಟು ಬೆಂಗಳೂರು ಮೂಲಕ ತಿರುಪತಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಮತ್ತು ಕಾರಿನ ನಡುವೆ ಗುಂಡ್ಯದ ಗಡಿ ದೇವಸ್ಥಾನದ ಸಮೀಪ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಗಂಭೀರವಾಗಿ ಸಿಲುಕಿಕೊಂಡಿದ್ದರು.
ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಸ್ಥಳೀಯರು ರಕ್ತಸಿಕ್ತವಾಗಿದ್ದವರನ್ನು ಹೊರತೆಗೆದು ರಕ್ಷಣೆ ಕಾರ್ಯ ನಡೆಸಿದರು.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


