
ಹಗರೆ : ನಟ ಪುನೀತ್ ರಾಜ್ಕುಮಾರ್ ಅವರ 51ನೇ ಹುಟ್ಟುಹಬ್ಬವನ್ನು ಹಗರೆ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಿಸಲಾಯಿತು.
ಬೀಡ ಅಂಗಡಿ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಪುನೀತ್ ರಾಜಕುಮಾರ್ ಅವರು ಕೇವಲ ಒಬ್ಬ ನಟ ಮಾತ್ರವಲ್ಲ, ಸಮಾಜಮುಖಿ ಚಿಂತನೆ ಹೊಂದಿದ ಮಹಾನ್ ವ್ಯಕ್ತಿತ್ವ. ಅವರು ಮಾಡಿದ ಸೇವೆಗಳು ಇಂದು ಕೂಡ ಜನಮನದಲ್ಲಿ ಜೀವಂತವಾಗಿವೆ. ಬಡವರ ಸಹಾಯ, ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹ, ಆರೋಗ್ಯ ಸೇವೆಗಳ ಬಗ್ಗೆ ತೋರಿದ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಅರ್ಥಪೂರ್ಣವಾಗಿ, ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅವರ ಸ್ಮರಣೆಯನ್ನು ಜೀವಂತವಾಗಿರಿಸುತ್ತೇವೆ. ಯುವಜನತೆ ಅವರ ಆದರ್ಶಗಳನ್ನು ಅನುಸರಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ವರ್ತಕರಾದ ಹಾಲಪ್ಪ ಹಾಗೂ ಹುಲುಗುಂಡಿ ಮಹೇಶ್ ಮಾತನಾಡಿ, ಪುನೀತ್ ರಾಜಕುಮಾರ್ ಅವರ ಸಾಧನೆ, ಸರಳತೆ ಮತ್ತು ಮಾನವೀಯತೆ ಬಗ್ಗೆ ಸ್ಮರಿಸಿದರು.
ಕಾರ್ಯಕ್ರಮದ ಅಂಗವಾಗಿ ಪುನೀತ್ ರಾಜಕುಮಾರ್ ಅವರಿಗೆ ಇಷ್ಟವಾದ ವಿವಿಧ ತಿಂಡಿ-ತಿನಿಸುಗಳನ್ನು ತಯಾರಿಸಿ, ಸುಮಾರು ಸಾವಿರ ಮಂದಿಗೆ ಬಿರಿಯಾನಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
