ಸಕಲೇಶಪುರ:ರಾಜ್ಯವ್ಯಾಪಿ ಪರವಾನಗಿ ಭೂಮಾಪಕರ ಮುಷ್ಕರ ತೀವ್ರಗೊಂಡ ಹಿನ್ನೆಲೆ, ಸಕಲೇಶಪುರ ತಾಲೂಕಿನಲ್ಲಿ ಸರ್ವೇ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿರುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಂಘದ “ಸಮಾನ ಕೆಲಸಕ್ಕೆ ಸಮಾನ ವೇತನ” ಬೇಡಿಕೆಯನ್ನು ಬೆಂಬಲಿಸಿ ಹೋರಾಟ ಮುಂದುವರಿಯುತ್ತಿದ್ದು, ತಾಲ್ಲೂಕು ಸಂಘವೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಈ ಕುರಿತು ಮಾತನಾಡಿದ ತಾಲ್ಲೂಕು ಪರವಾನಗಿ ಭೂಮಾಪಕರ ಗೌರವ ಅಧ್ಯಕ್ಷರಾದ ಹೇಮಚಂದ್ರ ರಾಚಯ್ಯ, ತಾಲೂಕಿನಲ್ಲಿ 1800ಕ್ಕೂ ಹೆಚ್ಚು 11ಇ, ತತ್ಕಾಲ್ ಪೋಡಿ, ಅಲಿನೇಷನ್, ಹದ್ದುಬಸ್ತು ಸೇರಿದಂತೆ ವಿವಿಧ ಸರ್ವೇ ಸಂಬಂಧಿತ ಅರ್ಜಿಗಳು ಬಾಕಿ ಉಳಿದಿವೆ ಎಂದು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ರೈತರು ತಾಲೂಕು ಕಚೇರಿ ಹಾಗೂ ಸರ್ವೇ ಕಚೇರಿಗಳಿಗೆ ಅಲೆದಾಡುವಂತಾಗಿದ್ದು, ಸಮಸ್ಯೆಗಳಿಗೆ ಪರಿಹಾರ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.ರಾಜ್ಯದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಪರವಾನಗಿ ಭೂಮಾಪಕರು ಕಾರ್ಯನಿರ್ವಹಿಸುತ್ತಿದ್ದು, ಸಕಲೇಶಪುರದಲ್ಲೇ 13 ಮಂದಿ ಭೂಮಾಪಕರು ಇದ್ದಾರೆ. ಆದರೆ ಫೆಬ್ರವರಿ 25ರಿಂದ ಆರಂಭವಾದ ಮುಷ್ಕರದ ಪರಿಣಾಮವಾಗಿ ಸರ್ವೇ ಕಾರ್ಯಗಳು ಸಂಪೂರ್ಣವಾಗಿ ನಿಂತುಹೋಗಿವೆ. ಇದರಿಂದ ರೈತರಿಗೆ ಅಗತ್ಯವಿರುವ ವಿವಿಧ ಸೇವೆಗಳು ಲಭ್ಯವಾಗದೆ ಕೃಷಿ ಚಟುವಟಿಕೆಗಳಿಗೂ ಅಡಚಣೆ ಉಂಟಾಗಿದೆ.

ಹಾಸನ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಸುಮಾರು 5 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಾಕಿಯಾಗಿದ್ದು, ಸರ್ವೇ ಇಲಾಖೆಗೆ ಕೋಟ್ಯಾಂತರ ರೂಪಾಯಿ ಪಾವತಿಸಿದ ರೈತರು ನಿರೀಕ್ಷಿತ ಸೇವೆ ಪಡೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪರಿಸ್ಥಿತಿಗೆ ಸರ್ಕಾರದ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಆರೋಪಿಸಿದ ಅವರು, ಭೂಮಾಪಕರ ಪ್ರಮುಖ ಬೇಡಿಕೆಯಾದ “ಸಮಾನ ಕೆಲಸಕ್ಕೆ ಸಮಾನ ವೇತನ” ವಿಚಾರದಲ್ಲಿ ಸರ್ಕಾರ ಇನ್ನೂ ಸ್ಪಂದಿಸದಿರುವುದು ವಿಷಾದನೀಯ ಎಂದು ಕಿಡಿಕಾರಿದರು.

ಈ ಸಮಸ್ಯೆಯ ಕುರಿತು ಸರ್ವೇ ಇಲಾಖೆಯ ಆಯುಕ್ತರು, ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಸಚಿವರು ಹಾಗೂ ರಾಜ್ಯದ ಶಾಸಕರು ತಕ್ಷಣ ಗಮನಹರಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಭೂಮಾಪಕರ ಬೇಡಿಕೆಗಳನ್ನು ಈಡೇರಿಸಿ ಸರ್ವೇ ಕಾರ್ಯಗಳನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವವರೆಗೆ ಮುಷ್ಕರ ಮುಂದುವರಿಯಲಿದೆ ಎಂದು ಎಚ್ಚರಿಸಿದ ಹೇಮಚಂದ್ರ ರಾಚಯ್ಯ, ಕರ್ನಾಟಕ ರಾಜ್ಯ ಪರವಾನಗಿ ಭೂಮಾಪಕರ ಸಂಘದ ಹೋರಾಟಕ್ಕೆ ತಾಲ್ಲೂಕು ಸಂಘ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಸ್ಪಷ್ಟಪಡಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *