ಸಕಲೇಶಪುರ : ಪಟ್ಟಣದಲ್ಲಿ ಮಂಗಳವಾರ ಜೈನ್ ಸಮಾಜದ ವತಿಯಿಂದ ಭಗವಾನ್ ಮಹಾವೀರರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಅಂಗವಾಗಿ ಪಟ್ಟಣದ ಅಶೋಕ ರಸ್ತೆಯಲ್ಲಿರುವ ಜೈನ್ ಸಮಾಜದ ಭಗವಾನ್ ಕುಂಥುನಾಥ್ ದೇವಸ್ಥಾನದಿಂದ ಮಹಾವೀರರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಿ, ವಾದ್ಯ ವೃಂದದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಜೈನ್ ಸಮಾಜದ ಸದಸ್ಯರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಾನ್ ಮಹಾವೀರರ ಸಂದೇಶಗಳನ್ನು ಸಾರುವ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು ಕೆಲಕಾಲ ಮೆರವಣಿಗೆಯಲ್ಲಿ ಭಾಗವಹಿಸಿ ಜೈನ್ ಸಮಾಜದ ಸದಸ್ಯರಿಗೆ ಶುಭಾಶಯಗಳನ್ನು ತಿಳಿಸಿದರು.

ಜೈನ್ ಸಮಾಜದ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್ ಮಾತನಾಡಿ, ಭಗವಾನ್ ಮಹಾವೀರರು ನೀಡಿದ ಅಹಿಂಸೆ, ಸತ್ಯ, ಧರ್ಮ ಮತ್ತು ಸಹಿಷ್ಣುತೆ ಎಂಬ ಮೌಲ್ಯಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಾಸಕ್ತಿಯಾಗಿದೆ. ಅವರ ಉಪದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನೆರವೇರಿಸಲ್ಪಟ್ಟಿದ್ದು, ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಹ ನಡೆಯುವ ಮೂಲಕ ಹಬ್ಬದ ಸಂಭ್ರಮ ಹೆಚ್ಚಾಯಿತು.

ಈ ಸಂದರ್ಭದಲ್ಲಿ ಜೈನ್ ಸಮಾಜದ ದಿನೇಶ್,ವಿಜಯ್ ಕುಮಾರ್,ಪೃಥ್ವಿರಾಜ್,ಭರತ್, ಸ್ವಸ್ತಿಕ್ ಕಮಲೇಶ್, ರಮೇಶ್, ಸುರೇಶ್,ಮುಂತಾದವರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *