
ಸಕಲೇಶಪುರ: ರೋಗಗಳು ಬರುವ ಮುನ್ನವೇ ಎಚ್ಚರ ವಹಿಸಿದರೆ ಆಸ್ಪತ್ರೆ ಹಾಗೂ ಮಾತ್ರೆಗಳ ಅವಲಂಬನೆ ಕಡಿಮೆ ಮಾಡಬಹುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲ್ಲೂಕಿನ ಬಾಳ್ಳುಪೇಟೆಯ ಶ್ರೀ ಕೆಂಚಮ್ಮ ಮಲ್ಲೇಗೌಡ ಸಮುದಾಯ ಭವನದಲ್ಲಿ ಶುಕ್ರವಾರ ಬಿಜೆಪಿ ಮುಖಂಡ ಜಯಪ್ರಕಾಶ್ ದೊಡ್ಡದಿಣ್ಣೆ ಅವರ ನೇತೃತ್ವದಲ್ಲಿ, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಹಾಗೂ ಯುವ ವೈದ್ಯ ಡಾ. ಲಕ್ಷ್ಮಣ್ ಗಂಗಾ ಅವರ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವಾಗಿದ್ದರೆ ಮಾತ್ರ ಸುಖ ಜೀವನ ನಡೆಸಲು ಸಾಧ್ಯ. ಇಲ್ಲದಿದ್ದರೆ ದುಡಿದ ಹಣವನ್ನೆಲ್ಲಾ ಆಸ್ಪತ್ರೆಗಳಿಗೆ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣಗಳು ಕಾಣಿಸುವುದಕ್ಕೂ ಮುನ್ನವೇ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಶಿಬಿರಗಳು ಬಡವರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತವೆ. ಇಂತಹ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜಿಸುವ ಅಗತ್ಯವಿದೆ. ಇಂದಿನ ಒತ್ತಡಪೂರ್ಣ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಾಗಿದ್ದು, ಇಂತಹ ಶಿಬಿರಗಳು ಗ್ರಾಮೀಣ ಜನತೆಗೆ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಈ ವೇಳೆ ವಿವಿಧ ವಿಭಾಗಗಳಿಂದ ಸುಮಾರು 500ಕ್ಕೂ ಹೆಚ್ಚು ರೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಬಾಕ್ಸ್ : ಯುವ ವೈದ್ಯನ ಸೇವೆಗೆ ಶ್ಲಾಘನೆಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಕಡೆ ವಿಶೇಷ ಆಸಕ್ತಿ ವಹಿಸಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿರುವ ತಾಲೂಕು ಬಿಜೆಪಿ ಉಪಾಧ್ಯಕ್ಷ ಜಯಪ್ರಕಾಶ್ ದೊಡ್ಡದಿಣ್ಣೆ ಅವರ ಸುಪುತ್ರರಾದ ಫಾದರ್ ಮುಲ್ಲರ್ ಆಸ್ಪತ್ರೆಯ ಯುವ ವೈದ್ಯ ಡಾ. ಲಕ್ಷ್ಮಣ್ ಗಂಗಾ ಅವರ ಸೇವೆ ಶ್ಲಾಘನೀಯ ಎಂದು ಶಾಸಕ ಸಿಮೆಂಟ್ ಮಂಜು ಪ್ರಶಂಸಿಸಿದರು.
ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ. ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ತೋರಿರುವ ಯುವ ವೈದ್ಯರ ಈ ಪ್ರಯತ್ನ ಇತರರಿಗೆ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಚಂಚಲ ಕುಮಾರಸ್ವಾಮಿ, ಶಾಸಕ ಸಿಮೆಂಟ್ ಮಂಜು, ಧರ್ಮಪತ್ನಿ ಪ್ರತಿಭಾ ಮಂಜುನಾಥ್,ಹಿಂದೂಪರ ಸಂಘಟನೆಗಳ ಮುಖಂಡ ರಘು ಸಕಲೇಶಪುರ, ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಯಡೇಹಳ್ಳಿ ಮಂಜುನಾಥ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
