
ಬೇಲೂರು : ತಾಲ್ಲೂಕಿನ ಆರೇಹಳ್ಳಿ ಹೋಬಳಿಯ ಲಿಂಗಾಪುರ ಗ್ರಾಮದ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಆರೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಫಿಕುಲ್ ಇಸ್ಲಾಂ (35) ಹಾಗೂ ಮೊಹಮ್ಮದ್ ರಫಿಕುಲ್ ಅಲಿ (25) ಎಂದು ಗುರುತಿಸಲಾಗಿದೆ. ಇಬ್ಬರೂ ಮೂಲತಃ ಅಸ್ಸಾಂ ರಾಜ್ಯದವರಾಗಿದ್ದು, ಪ್ರಸ್ತುತ ಆರೇಹಳ್ಳಿ ಹೋಬಳಿಯ ಲಿಂಗಾಪುರ ಲೈನ್ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಉಪನಿರೀಕ್ಷಕಿ ಶೋಭಾ ಭರಮಣ್ಣವರ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ ಲಿಂಗಾಪುರ ಗ್ರಾಮದ ಬಸ್ ನಿಲ್ದಾಣದ ಬಳಿ ದಾಳಿ ನಡೆಸಲಾಗಿದೆ. ಈ ವೇಳೆ ಆರೋಪಿಗಳು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ನಲ್ಲಿ ಒಣಗಿದ ಗಾಂಜಾ ಸೊಪ್ಪನ್ನು ಅಕ್ರಮವಾಗಿ ಮಾರಾಟ ಮಾಡಲು ತಂದಿರುವುದು ಪತ್ತೆಯಾಗಿದೆ.
ದಾಳಿಯ ವೇಳೆ ಆರೋಪಿಗಳಿಂದ ಸುಮಾರು 325 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸುಪ್ರೀತ್, ಸಂಶುದ್ದೀನ್, ಮಂಜುನಾಥ್ ಹಾಗೂ ದರ್ಶನ್ ಭಾಗವಹಿಸಿದ್ದರು.
