
ಸಕಲೇಶಪುರ : ಮೇ 12:ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನವು ಎಲ್ಲ ವರ್ಗಗಳ ಜನರಿಗೆ ಸಮಾನ ಹಕ್ಕು ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಕಲೇಶಪುರ ಘಟಕ–ಚಿಕ್ಕಮಗಳೂರು ವಿಭಾಗದ ವತಿಯಿಂದ ಕೆಎಸ್‌ಆರ್‌ಟಿಸಿ ಡಿಪೋ ಆವರಣದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಅಂಬೇಡ್ಕರ್ ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸಹೋದರತ್ವದ ತತ್ವಗಳನ್ನು ಅಂಬೇಡ್ಕರ್ ದೇಶಕ್ಕೆ ನೀಡಿದ್ದು, ಇವುಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.ಶಿಕ್ಷಣವೇ ಸಮಾಜ ಪರಿವರ್ತನೆಯ ಶಕ್ತಿಯಾಗಿದ್ದು, ಶಿಕ್ಷಣದ ಮೂಲಕವೇ ಅಭಿವೃದ್ಧಿ ಸಾಧಿಸಬಹುದು. ಸಮಾಜದಲ್ಲಿ ಜಾತಿ ಭೇದ ಹಾಗೂ ಅಸಮಾನತೆ ನಿವಾರಣೆಗೆ ಎಲ್ಲರೂ “ದೇಶ ಮೊದಲು” ಎಂಬ ಮನೋಭಾವದಿಂದ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಶಾಸಕ ಸಿಮೆಂಟ್ ಮಂಜು ಕರೆ ನೀಡಿದರು.
ಭೀಮವಿಜಯ ದಿನಪತ್ರಿಕೆ ಸಂಪಾದಕ ನಾಗರಾಜು ಹೆತ್ತೂರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯದ ನಾಯಕನಲ್ಲ, ಇಡೀ ದೇಶದ ಸಾಮಾಜಿಕ ನ್ಯಾಯದ ದಿಕ್ಕು ತೋರಿದ ಮಹಾನ್ ಚಿಂತಕರಾಗಿದ್ದಾರೆ ಎಂದು ಹೇಳಿದರು.
ಸಮಾಜದಲ್ಲಿ ಶಿಕ್ಷಣ, ಸಮಾನತೆ ಹಾಗೂ ಸ್ವಾಭಿಮಾನ ಬೆಳೆಸುವಲ್ಲಿ ಅಂಬೇಡ್ಕರ್ ಅವರ ಹೋರಾಟ ಇಂದಿಗೂ ಯುವಜನತೆಗೆ ಪ್ರೇರಣೆಯಾಗಿದ್ದು, ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡಿದ್ದು, ಅದರ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ಇಂದಿನ ಸಮಾಜದಲ್ಲಿ ಅಸಮಾನತೆ, ದೌರ್ಜನ್ಯ ಹಾಗೂ ಸಾಮಾಜಿಕ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವ ಅಗತ್ಯವಿದ್ದು, ಅಂಬೇಡ್ಕರ್ ಅವರ ವಿಚಾರಧಾರೆಗಳು ಯುವ ಪೀಳಿಗೆಗೆ ದಾರಿ ದೀಪವಾಗಬೇಕು ಎಂದು ನಾಗರಾಜು ಹೆತ್ತೂರು ಅಭಿಪ್ರಾಯಪಟ್ಟರು.
ಚಿಕ್ಕಮಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸತೀಶ್ ವಿ ಮಾತನಾಡಿ, ಸರ್ಕಾರಿ ನೌಕರರು ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಅಂಬೇಡ್ಕರ್ ಪ್ರಶಸ್ತಿ ವಿಜೇತ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಯೋಜಕ ಅಣ್ಣಯ್ಯ ಹೆತ್ತೂರು ಹಾಗೂ ಸಫಾಯಿ ಕರ್ಮಚಾರಿ ಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷ ರವೀಂದ್ರ ಎನ್, ಗೌರವಾಧ್ಯಕ್ಷ ಹಿರೇಮಗಳೂರು ರಾಮಚಂದ್ರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಾಂತರಾಜು ಸಿಡಿಗಳಲೇ, ಕಾನೂನು ಸಲಹೆಗಾರ ಅನಿಲ್ ಕುಮಾರ್ ಆರ್, ಹಾಸನ ಜಿಲ್ಲಾ ಸಂಯೋಜಕ ಯೋಗೇಶ್ ಎಂ ಎಸ್, ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಷನ್ ಅಧ್ಯಕ್ಷೆ ಕಲ್ಪನಾ ಕೀರ್ತಿ ಹಾಗೂ ವಿಭಾಗದ ಅಧ್ಯಕ್ಷ ಉಮೇಶ್ ಎಂ ಎಸ್ . ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲ ಅಬ್ದುಲ್ ಖುದ್ದೂಸ್ ಬಿ, ವಿಭಾಗೀಯ ಯಾಂತ್ರಿಕ ಅಭಿಯಂತರ ಶಿವಲಿಂಗಯ್ಯ, ವಿಭಾಗೀಯ ಸಂಚಲನಾಧಿಕಾರಿ (ಪ್ರಭಾರ) ಶ್ರೀಧರಸ್ವಾಮಿ, ಸಹಾಯಕ ಆಡಳಿತಾಧಿಕಾರಿ ರುದ್ರಮೂರ್ತಿ ಎಲ್ ಕೆ, ಸಹಾಯಕ ಕಾರ್ಮಿಕ ಕಲ್ಯಾಣಾಧಿಕಾರಿ ಮಮತಾ ಎಸ್, ಸಹಾಯಕ ಲೆಕ್ಕಾಧಿಕಾರಿ ಜಯಣ್ಣ ಕೆ ಎ, ಸಹಾಯಕ ಭದ್ರತಾ ಜಾಗೃತಾಧಿಕಾರಿ ಶರತ್, ಉಗ್ರಾಣಾಧಿಕಾರಿ ಮಹೇಶ್, ಹಿರಿಯ ಘಟಕ ವ್ಯವಸ್ಥಾಪಕ ರವಿ ಎ ಎನ್, ಘಟಕ ವ್ಯವಸ್ಥಾಪಕರಾದ ಸುದೀಶ್ ಎಮ್ ಎನ್, ಬಿ ಆರ್ ಮಂಜುನಾಥ್, ಕೃಷ್ಣಪ್ಪ, ರವಿನಾಯ್ಕ, ನಾಗರಾಜ ಕಾರ್ವಿ ಸೇರಿದಂತೆ ಹಲವು ಅಧಿಕಾರಿಗಳು, ಸಿಬ್ಬಂದಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸಕಲೇಶಪುರ ಘಟಕದ ಅಧ್ಯಕ್ಷ ಬಿ.ಸಿ. ಮಂಜಯ್ಯ ಮತ್ತು ಪದಾಧಿಕಾರಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಅಮ್ಮ ವಸುಂದರೆ ಕಲಾತಂಡದ ವತಿಯಿಂದ ಭೀಮಗಾಯನ ನಡೆಯಿತು.
ರಾಷ್ಟ್ರ ಪ್ರಶಸ್ತಿ ಹಾಗೂ ಚಿನ್ನದ ಪದಕ ವಿಜೇತ ಅಂತರಾಷ್ಟ್ರೀಯ ಜಾನಪದ ಕಲಾವಿದ ಡಾ. ಅಮೃರಾಮಚಂದ್ರ ಜೀ ಅವರ ತಂಡದ ಗಾಯನ ವಿಶೇಷ ಆಕರ್ಷಣೆಯಾಗಿತ್ತು.



