
ಸಕಲೇಶಪುರ : ಈಗಾಗಲೇ ಮಲೆನಾಡು ಭಾಗಕ್ಕೆ ಮುಂಗಾರು ಕಾಲಿಡುವ ಸಮಯ ಹತ್ತಿರವಾಗುತ್ತಿದೆ, ಮಲೆನಾಡಿನಲ್ಲಿ ಮುಂದಿನ 3-4 ತಿಂಗಳು ಗಾಳಿ ಸಹಿತ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗುವ ಬಗ್ಗೆ ಹವಾಮಾನ ಇಲಾಖೆ ವರದಿಗಳು ತಿಳಿಸಿವೆ. ನಮ್ಮ ಭಾಗದಲ್ಲಿ ಕಾಡಾನೆ ಸಮಸ್ಯೆ ಇರುವ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳಲ್ಲಿ ಇರುವ ಕೆಳಮಟ್ಟದ ವೈರ್ ಗಳನ್ನು ಪರಿಶೀಲಿಸಿ ದುರಸ್ತಿ ಮಾಡುವ ಕೆಲಸ ಆಗಬೇಕಾಗಿದೆ. ಪ್ರತಿ ವರ್ಷ ವಿದ್ಯುತ್ ಆಘಾತಕ್ಕೆ ಆನೆ – ಮಾನವರು – ಜಾನುವಾರುಗಳು ಬಲಿಯಾಗುತ್ತಲೇ ಬಂದಿವೆ.
ಇಲಾಖೆ ಈ ಬಗ್ಗೆ ಗಮನ ಹರಿಸಿ ವಿದ್ಯುತ್ ಇಲಾಖೆಗೆ ಆನೆಗಳ ಹಾವಳಿ ಇರುವ ಪ್ರದೇಶಗಳಲ್ಲಿ ಅಪಾಯಕಾರಿ ಆಗಬಹುದಾದ ಕಂಬಗಳನ್ನು ಹಾಗೂ ವೈರ್ ಗಳನ್ನು ದುರಸ್ಥಿಗೊಳಿಸಿದರೆ ಅಮೂಲ್ಯ ಜೀವ ಹಾನಿಯನ್ನ ತಡೆಗಟ್ಟಬಹುದು. ಹಾಗೂ ತಾಲ್ಲೂಕಿನ ವ್ಯಾಪ್ತಿಯ ರಸ್ತೆ ಬದಿ ಇರುವ ಮರದ ಕೊಂಬೆಗಳನ್ನು ಕೂಡಲೇ ತೆರವು ಗೊಳಿಸಿ ಯಾವುದೇ ಅನಾಹುತಗಳು ಆಗದಂತೆ ಎಚ್ಚರಿಕೆ ವಹಿಸಿ. ಚೆಸ್ಕಾಂ ಇಲಾಖೆ ಹಾಗೂ ಅರಣ್ಯ ಇಲಾಖೆ ಗ್ರಾಮಸ್ಥರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಜೊತೆ ಸಮಾಲೋಚನೆ ಮಾಡಬೇಕು ಎಂದು ಕರವೇ (ಪ್ರವೀಣ್ ಶೆಟ್ಟಿ ಬಣ) ಆಗ್ರಹಿಸಿದೆ.*
