
ಸಕಲೇಶಪುರ : ತಾಲೂಕಿನ ಹೆತ್ತೂರು ಹೋಬಳಿ ಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯವಿರುವ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕಳೆದ ಒಂದೂವರೆ ವರ್ಷದಿಂದ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಸರ್ಕಾರದಿಂದ ಬಸ್ ಸೌಲಭ್ಯ ಸಿಗದಿದ್ದರೆ ಸಾರ್ವಜನಿಕರು ಹಾಗೂ ಬೆಳೆಗಾರರು ಸೇರಿ ಬಸ್ಸನ್ನು ಲೀಸಿಗೆ ಪಡೆದು ಓಡಿಸುವ ಪರಿಸ್ಥಿತಿ ಎದುರಾಗಿದೆ ಎಂದು ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಕಾರ್ಯದರ್ಶಿ ಉದಯ್ ಗುಂಡಿಗೆರೆ ತಿಳಿಸಿದ್ದಾರೆ.
ಕೂಡುರಸ್ತೆಯಿಂದ ಸಕಲೇಶಪುರಕ್ಕೆ ಬೆಳಗಿನ ಸಮಯದಲ್ಲಿ ನೇರ ಬಸ್ ಸೌಲಭ್ಯ ಇಲ್ಲದ ಕಾರಣ ಪ್ರತಿನಿತ್ಯ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ರೈತರು, ನಾಡಕಚೇರಿ, ತಹಶೀಲ್ದಾರ್ ಕಚೇರಿ ಹಾಗೂ ಇತರೆ ಸರ್ಕಾರಿ ಕಚೇರಿಗಳಿಗೆ ತೆರಳುವ ಸಾರ್ವಜನಿಕರು ಪರದಾಡುವಂತಾಗಿದೆ.
ಕೂಡುರಸ್ತೆಯಿಂದ ಬೆಳಗ್ಗೆ 9 ಗಂಟೆಗೆ ಹೊರಡುವ ಬಸ್ ಹೆತ್ತೂರು, ವಳಲಹಳ್ಳಿ, ಬ್ಯಾಕರವಳ್ಳಿ, ಕ್ಯಾನಹಳ್ಳಿ ಮಾರ್ಗವಾಗಿ ಸಕಲೇಶಪುರಕ್ಕೆ ಸುಮಾರು 10.15ರ ವೇಳೆಗೆ ತಲುಪುವಂತೆ ವ್ಯವಸ್ಥೆ ಮಾಡಿದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು.ಬೆಳಗ್ಗೆ 8.30ರಿಂದ 10 ಗಂಟೆಯವರೆಗೆ ಪ್ರಯಾಣಿಕರು ಬಸ್‌ಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ.
ನಂತರ ಬರುವ ಮೂಡಿಗೆರೆ ಮಾರ್ಗದ ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತುಂಬುವುದರಿಂದ ವಯೋವೃದ್ಧರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ನಿಂತುಕೊಂಡೇ ಪ್ರಯಾಣಿಸುವಂತಾಗಿದೆ.
ಕೆಲವರು ಬಸ್‌ನಲ್ಲಿ ಜಾಗ ಸಿಗದೆ ಉಳಿದುಕೊಳ್ಳುವ ಪರಿಸ್ಥಿತಿಯೂ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಗ್ರಾಮಸ್ಥರು ಹಾಗೂ ಬೆಳೆಗಾರರ ಸಂಘದ ವತಿಯಿಂದ ಹಲವು ಬಾರಿ ಶಾಸಕರಿಗೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಉದಯ್ ಗುಂಡಿಗೆರೆ ಆರೋಪಿಸಿದರು.
“ಜನರ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಬಸ್ ವ್ಯವಸ್ಥೆ ಮಾಡದಿದ್ದರೆ, ನಾವು ಸಾರ್ವಜನಿಕರು ಹಾಗೂ ಬೆಳೆಗಾರರು ಸ್ವಂತ ಹಣದಲ್ಲಿ ಬಸ್ಸನ್ನು ಲೀಸಿಗೆ ಪಡೆದು ಜನರ ಅನುಕೂಲಕ್ಕಾಗಿ ಓಡಿಸಲು ಸಿದ್ಧರಿದ್ದೇವೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು” ಎಂದು ಅವರು ಒತ್ತಾಯಿಸಿದರು.
ಹೊಸ ಬಸ್‌ಗಳು ಬಂದಾಗ ಅವಶ್ಯಕತೆ ಇರುವ ಗ್ರಾಮೀಣ ಮಾರ್ಗಗಳಿಗೆ ಆದ್ಯತೆ ನೀಡದೆ ಬೇರೆ ಮಾರ್ಗಗಳಿಗೆ ನೀಡುತ್ತಿರುವುದು ಸರಿಯಲ್ಲ. ಜನರ ಅಗತ್ಯತೆ ಆಧರಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಕೂಡುರಸ್ತೆ–ಸಕಲೇಶಪುರ ಮಾರ್ಗಕ್ಕೆ ಹೊಸ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಬೆಳೆಗಾರರ ಸಂಘ ಹಾಗೂ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
