ಹಾಸನ : ರಾಜ್ಯದ ಬೀದಿ ನಾಟಕ ಕಲಾವಿದರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ಅಗತ್ಯವಾಗಿದ್ದು, ಕಲಾವಿದರ ಏಳಿಗೆಗಾಗಿ ಎಲ್ಲಾರು ಒಟ್ಟಾಗಿ ಕೈಜೋಡಿಸಬೇಕಾಗಿದ್ದು, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳನ್ನು ಕಲಾವಿದರಿಗೆ ತಲುಪಿಸುವ ಮೂಲಕ ಅವರ ಜೀವನಮಟ್ಟ ಸುಧಾರಿಸಲು ಒಕ್ಕೂಟ ಬದ್ಧವಾಗಿದೆ ಎಂದು ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಸಬ್ಬನಹಳ್ಳಿ ರಾಜು ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟ ಹಾಗೂ ಜಿಲ್ಲಾ ಘಟಕದ ಸಹಯೋಗದಲ್ಲಿ ಸೋಮವಾರ ನಡೆದ ಮೈಸೂರು ವಿಭಾಗ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಬೀದಿ ನಾಟಕ ಕಲಾವಿದರು ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ವದ ಹೊಣೆ ಹೊತ್ತಿರುವವರು. ಸರ್ಕಾರದ ಜನಪರ ಯೋಜನೆಗಳು, ಸಾಮಾಜಿಕ ಸಂದೇಶಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳನ್ನು ಗ್ರಾಮದಿಂದ ಗ್ರಾಮಕ್ಕೆ, ಜನರಿಂದ ಜನರಿಗೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ನಿರ್ವಹಿಸುತ್ತಿದ್ದಾರೆ. ಇಂತಹ ಕಲಾವಿದರ ಬದುಕು ಭದ್ರವಾಗಬೇಕಾದರೆ ಸಂಘಟನೆಯು ಮತ್ತಷ್ಟು ಬಲಿಷ್ಠವಾಗಬೇಕು ಎಂದರು.

ರಾಜ್ಯದ ಎಲ್ಲಾ ಬೀದಿ ನಾಟಕ ತಂಡಗಳನ್ನು ಒಗ್ಗೂಡಿಸುವ ಉದ್ದೇಶದಿಂದ ವಿಭಾಗ ಮಟ್ಟದ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಕಲಾವಿದರ ಸಮಸ್ಯೆಗಳು, ಬೇಡಿಕೆಗಳು ಮತ್ತು ಮುಂದಿನ ಸಂಘಟನಾ ಕಾರ್ಯತಂತ್ರಗಳ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿದೆ. ಎಲ್ಲ ಕಲಾವಿದರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಸರ್ಕಾರದ ಮುಂದೆ ನಮ್ಮ ಬೇಡಿಕೆಗಳನ್ನು ಪರಿಣಾಮಕಾರಿಯಾಗಿ ಮಂಡಿಸಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೋಂದಾಯಿತವಾಗಿರುವ ಎಲ್ಲ ಬೀದಿ ನಾಟಕ ತಂಡಗಳ ಮುಖ್ಯಸ್ಥರು ಇಂತಹ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಕಲಾವಿದರ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ವೇದಿಕೆಯಾಗಬೇಕಿದೆ ಎಂದು ಹೇಳಿದರು.

“ಬೀದಿ ನಾಟಕ ಕಲಾವಿದರು ಸಮಾಜಕ್ಕೆ ಉತ್ತಮ ಸಂದೇಶ ನೀಡುವವರು. ಜನರಲ್ಲಿ ಅರಿವು ಮೂಡಿಸುವ ನಾವು ನಮ್ಮೊಳಗೇ ಭಿನ್ನಾಭಿಪ್ರಾಯ, ವೈಮನಸ್ಸು ಬೆಳೆಸಿಕೊಂಡರೆ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಸಾಧ್ಯವಾಗುವುದಿಲ್ಲ. ಕಲಾವಿದರು ಪರಸ್ಪರ ಸಹಕಾರ, ಶಿಸ್ತು ಹಾಗೂ ಒಗ್ಗಟ್ಟಿಗೆ ಮಾದರಿಯಾಗಬೇಕು” ಎಂದು ಅವರು ಸಲಹೆ ನೀಡಿದರು.

ಜಾನಪದ ಅಕಾಡೆಮಿ, ನಾಟಕ ಅಕಾಡೆಮಿ, ಯಕ್ಷಗಾನ ಅಕಾಡೆಮಿಗಳ ಮಾದರಿಯಲ್ಲೇ ಬೀದಿ ನಾಟಕ ಅಕಾಡೆಮಿಗೂ ಸರ್ಕಾರ ಪ್ರತ್ಯೇಕ ಅನುದಾನ ನೀಡಬೇಕು. ಆ ಅನುದಾನದ ಮೂಲಕ ಕಲಾವಿದರ ಕಲ್ಯಾಣ ಕಾರ್ಯಕ್ರಮಗಳು, ತರಬೇತಿ, ಆರೋಗ್ಯ ನೆರವು ಹಾಗೂ ಸಂಕಷ್ಟದಲ್ಲಿರುವ ಕಲಾವಿದರಿಗೆ ಆರ್ಥಿಕ ಸಹಾಯ ಒದಗಿಸುವ ವ್ಯವಸ್ಥೆ ರೂಪಿಸಬೇಕು ಎಂದು ಆಗ್ರಹಿಸಿದರು.

ಕಲಾವಿದರ ಆರೋಗ್ಯ ರಕ್ಷಣೆಗೆ ವಿಶೇಷ ಆರೋಗ್ಯ ನಿಧಿ ಸ್ಥಾಪಿಸುವ ಕುರಿತು ರಾಜ್ಯ ಸಮಿತಿಯಲ್ಲಿ ಈಗಾಗಲೇ ಚರ್ಚೆ ನಡೆಸಲಾಗಿದೆ. ಭವಿಷ್ಯದಲ್ಲಿ ಕಲಾವಿದರಿಗೆ ವೈದ್ಯಕೀಯ ನೆರವು, ತುರ್ತು ಆರ್ಥಿಕ ಸಹಾಯ ಹಾಗೂ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.

ಎಲ್ಲ ಕಲಾವಿದರು ಸಂಘಟನೆಯ ಸದಸ್ಯತ್ವ ಪಡೆದು ಒಗ್ಗಟ್ಟಿನಿಂದ ಕೈಜೋಡಿಸಿದರೆ ಮಾತ್ರ ಬೀದಿ ನಾಟಕ ಕಲಾವಿದರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಿ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಕರೆ ನೀಡಿದರು.

ಮೈಸೂರು ವಿಭಾಗದ ಹಾಸನ, ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಸೇರಿದಂತೆ ಎಂಟು ಜಿಲ್ಲೆಗಳ ಬೀದಿ ನಾಟಕ ಕಲಾತಂಡಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಕಲಾವಿದರ ಸಮಸ್ಯೆಗಳು, ಸರ್ಕಾರಿ ಸೌಲಭ್ಯಗಳು, ಸಂಘಟನೆ ಬಲವರ್ಧನೆ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಸಮಗ್ರವಾಗಿ ಚರ್ಚಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಂಡ್ಯ ಬಸವರಾಜು, ರಾಜ್ಯ ಉಪಾಧ್ಯಕ್ಷ ಕುಮಾರ್ ಕಟ್ಟೆಬೆಳಗುಲಿ, ರಾಜ್ಯ ಸಲಹಾ ಸಮಿತಿ ಸದಸ್ಯ ಕಾರವಾರದ ಪುರುಷೋತ್ತಮ ಗೌಡ, ಚಾಮರಾಜನಗರದ ಶಾಂತರಾಜು, ರಾಜ್ಯ ಸಂಚಾಲಕರಾದ ಲೋಕೇಶ್ ಭಕ್ತನಕಟ್ಟೆ, ನೀಲಮ್ಮ ಸೇರಿದಂತೆ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *