
ಬೇಲೂರು : ಅರೇಹಳ್ಳಿಯ ನಮ್ಮ ರೋಟರಿ ಕ್ಲಬ್‌ನ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ತಮ್ಮೆಲ್ಲರ ನಡುವೆ ಸ್ವೀಕರಿಸುತ್ತಿರುವುದು ಸಂತೋಷವಾಗುತ್ತಿದೆ ಎಂದು ನೂತನ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ರೋ.ಮಹಂತ್ ನಾರ್ವೆ ಹೇಳಿದರು.
ಬೇಲೂರು ತಾಲೂಕು ಅರೇಹಳ್ಳಿಯ ರೋಟರಿ ಭವನದಲ್ಲಿ ಏರ್ಪಡಿಸಲಾಗಿದ್ದ ರೋಟರಿ ಸಂಸ್ಥೆಯ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡು ಮಾತನಾಡಿದ ಅವರು ಸ್ವಾರ್ಥಕ್ಕಿಂತ ಸೇವೆ ಮುಖ್ಯ ಎಂಬ ರೋಟರಿಯ ಧ್ಯೇಯವಾಕ್ಯದಡಿ ಕೆಲಸ ಮಾಡಲಾಗುವುದು. ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ, ಬಾಲವಿಕಾಸ ಮತ್ತು ವಿಶೇಷ ಚೇತನ ಮಕ್ಕಳ ಸಬಲೀಕರಣ, ಸ್ವಚ್ಛ ಪರಿಸರ ಮತ್ತು ತ್ಯಾಜ್ಯ ನಿರ್ವಹಣೆ, ಮಾದಕ ವ್ಯಸನ ವಿರುದ್ಧದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.ಇವು ಕೇವಲ ಯೋಜನೆಗಳಲ್ಲ. ನಮ್ಮ ಸಮಾಜದಲ್ಲಿ ಶಾಶ್ವತ ಮತ್ತು ಅರ್ಥಪೂರ್ಣ ಬದಲಾವಣೆ ತರಬೇಕೆಂಬ ನಮ್ಮ ಬದ್ಧತೆಯ ಪ್ರತೀಕಗಳಾಗಿವೆ ಎಂದು ಹೇಳಿದರು.
ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ್ದ ಜಿಲ್ಲಾ ರಾಜ್ಯಪಾಲ ರೋ. ವಸಂತ್ ಹೋಬ್ಳಿದಾರ್ ಮಾತನಾಡಿ, ಪ್ರಕೃತಿ ರೀತಿಯ ಬದಲಾವಣೆಯು ಕೂಡ ರೋಟರಿ ಸಂಸ್ಥೆಯಲ್ಲಿದೆ. ನಮ್ಮ ಸಂಸ್ಥೆಯ ಮೂಲ ಉದ್ದೇಶ ಸ್ನೇಹ ಹಾಗೂ ಒಡನಾಟವನ್ನು ಸೃಷ್ಟಿಸುವುದುದಾಗಿದೆ. ಜನರನ್ನು ಮನಸ್ಸನ್ನು ಮುಟ್ಟುವಂತಹ ಸೇವೆ ಮಾಡಿದರೆ ರೋಟರಿ ಸಂಸ್ಥೆಯನ್ನು ಜನಸಾಮಾನ್ಯರು ಎಂದಿಂದಿಗೂ ನೆನೆಯುತ್ತಾರೆ. ಬದಲಾವಣೆ ಮೊದಲು ನಮ್ಮಿಂದ ಪ್ರಾರಂಭವಾದರೆ ಮಾತ್ರ ರೋಟರಿ ಸಂಸ್ಥೆಯ ಕಾರ್ಯಚಟುವಟಿಕೆಗಳು ಸಹ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತದೆ ಎಂದರು.
ಈ ವೇಳೆ ಕಾರ್ಯದರ್ಶಿ ರೋ.ವಿಜಯ್ , ಖಜಾಂಚಿ ರೋ.ರಘುನಂದನ್ ಆರ್.ಅಸಿಸ್ಟಂಟ್ ಗವರ್ನರ್ ರೋ.ಗಣೇಶ್,ಝೋನಲ್ ಲೆಫ್ಟಿನೆಂಟ್ ರೋ.ವೀರೇಂದ್ರ, ಹಾಗೂ ಇನ್ನಿತರು ಇದ್ದರು.
