
ಸಕಲೇಶಪುರ : ತಾಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗಾಲ ಗ್ರಾಮದ ಸುತ್ತಮುತ್ತ ಕಳೆದ ಮೂರು ದಿನಗಳಿಂದ ಮೂರು ಕಾಡಾನೆಗಳು ಬೀಡುಬಿಟ್ಟಿದ್ದು, ಪ್ರತಿದಿನ ರಾತ್ರಿ ಕಾಫಿ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟುಮಾಡುತ್ತಿವೆ. ಕಾಫಿ ಫಸಲು ಮೂಡುವ ಪ್ರಮುಖ ಹಂತದಲ್ಲೇ ಕಾಡಾನೆಗಳ ದಾಳಿಯಿಂದ ಬೆಳೆಗಾರರು ತೀವ್ರ ಆತಂಕ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಾಡಾನೆಗಳ ಹಾವಳಿಯಿಂದ ಕೆ.ಎಸ್. ಕಿರಣ್, ದಿವಾಕರ್, ಮದನ್ ಹಾಗೂ ಮೋಹನ್ ಅವರ ಕಾಫಿ ತೋಟಗಳಿಗೆ ಹೆಚ್ಚಿನ ಹಾನಿಯಾಗಿದೆ. ಪ್ರತಿಯೊಬ್ಬರ ತೋಟದಲ್ಲೂ ಸುಮಾರು 50ಕ್ಕೂ ಹೆಚ್ಚು ಫಸಲಿಗೆ ಬರುತ್ತಿದ್ದ ಕಾಫಿ ಗಿಡಗಳನ್ನು ಬುಡಸಮೇತ ತುಳಿದು ನಾಶಪಡಿಸಿದ್ದು, ಬಾಳೆ ಹಾಗೂ ತೆಂಗಿನ ಮರಗಳನ್ನೂ ಮುರಿದು ಹಾಕಿವೆ. ಹಲವು ವರ್ಷಗಳ ಶ್ರಮದಿಂದ ಬೆಳೆಸಿದ ಕಾಫಿ ಗಿಡಗಳು ಕ್ಷಣಾರ್ಧದಲ್ಲಿ ನಾಶವಾಗಿರುವುದರಿಂದ ಬೆಳೆಗಾರರು ಕಣ್ಣೀರಿಡುವಂತಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಯಸಳೂರು ವಲಯದ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ರೇವಣಸಿದ್ಧಯ್ಯ ಹಿರೇಮಠ್ ಅವರು ಇಟಿಎಫ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ತೋಟಗಳನ್ನು ಪರಿಶೀಲಿಸಿದರು.
ಬೆಳೆ ಹಾನಿಯನ್ನು ವೀಕ್ಷಿಸಿದ ಅವರು, ರೈತರಿಂದ ಮಾಹಿತಿ ಪಡೆದು ಸಮಸ್ಯೆಯನ್ನು ಆಲಿಸಿ, ಹಾನಿಯ ಸಂಪೂರ್ಣ ವಿವರವನ್ನು ದಾಖಲಿಸಿಕೊಂಡರು.ಈ ವೇಳೆ ಗ್ರಾಮಸ್ಥರು ಹಾಗೂ ಬೆಳೆಗಾರರ ಸಂಘದ ಪದಾಧಿಕಾರಿಗಳು, ಕಾಡಾನೆಗಳನ್ನು ತಕ್ಷಣ ಸೆರೆಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.
ಕಾಡಾನೆಗಳ ಭೀತಿಯಿಂದ ಬೆಳೆಗಾರರು ತೋಟಗಳಿಗೆ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು, ಇದೇ ಸಮಯದಲ್ಲಿ ಕಾಫಿ ಫಸಲು ಹಂತದಲ್ಲಿರುವ ಗಿಡಗಳು ನಾಶವಾದರೆ ಮತ್ತೆ ಉತ್ಪಾದನೆಗೆ ಬರಲು 10ರಿಂದ 15 ವರ್ಷಗಳು ಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.ಇದಲ್ಲದೆ, ಕಾಡಾನೆಗಳನ್ನು ಸ್ಥಳಾಂತರಿಸುವವರೆಗೆ ಕರಡಿಗಾಲ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಟಿಎಫ್ ಸಿಬ್ಬಂದಿಯನ್ನು ನಿರಂತರವಾಗಿ ನಿಯೋಜಿಸಿ ಬೆಳೆಗಾರರ ಜೀವ ಹಾಗೂ ಆಸ್ತಿಗೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿದರು.
ಕಾಫಿ ತೋಟ ಹಾನಿಗೊಳಗಾದ ರೈತರ ಸಮಸ್ಯೆಯನ್ನು ಆಲಿಸಿ ಮಾತನಾಡಿದ ಅರಣ್ಯಾಧಿಕಾರಿ ರೇವಣಸಿದ್ಧಯ್ಯ ಹಿರೇಮಠ್, “ಕರಡಿಗಾಲ ಭಾಗದ ಕಾಡಾನೆಗಳ ಹಾವಳಿಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹಾನಿಯ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿ, ರೈತರಿಗೆ ಸರ್ಕಾರದ ನಿಯಮಾನುಸಾರ ಶೀಘ್ರ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಕಾಡಾನೆಗಳ ನಿಯಂತ್ರಣ ಹಾಗೂ ಸ್ಥಳಾಂತರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.
ಬೆಳೆಗಾರರ ಸಮಸ್ಯೆಗೆ ತ್ವರಿತ ಸ್ಪಂದಿಸುತ್ತಿರುವ ಅರಣ್ಯಾಧಿಕಾರಿಇತ್ತೀಚೆಗೆ ಯಸಳೂರು ಅರಣ್ಯ ವಲಯದ ಅರಣ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ರೇವಣಸಿದ್ಧಯ್ಯ ಹಿರೇಮಠ್ ಅವರು ಹಗಲು-ರಾತ್ರಿ ಎನ್ನದೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಾಡಾನೆಗಳ ಹಾವಳಿ ಸೇರಿದಂತೆ ಅರಣ್ಯ ಸಂಬಂಧಿತ ಯಾವುದೇ ಸಮಸ್ಯೆ ಕುರಿತು ರೈತರಿಂದ ಕರೆ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಬೆಳೆಗಾರರಲ್ಲಿ ವಿಶ್ವಾಸ ಮೂಡಿಸಿದೆ. ಅವರ ಸ್ಪಂದನಾಶೀಲತೆ, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆಯಿಂದ ಈ ಭಾಗದ ಜನರಲ್ಲಿ ದಕ್ಷ ಹಾಗೂ ಜನಸ್ನೇಹಿ ಅರಣ್ಯಾಧಿಕಾರಿಯಾಗಿ ಉತ್ತಮ ಹೆಸರು ಗಳಿಸಿದ್ದಾರೆ.
ಈ ಸಂದರ್ಭದಲ್ಲಿ ಬೆಳೆಗಾರರ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಗ್ರಾಮಸ್ಥರು ಹಾನಿಗೊಳಗಾದ ತೋಟಗಳ ಫೋಟೋಗಳನ್ನು ಅಧಿಕಾರಿಗಳಿಗೆ ತೋರಿಸಿ, ಕಾಡಾನೆಗಳ ಹಾವಳಿಯಿಂದ ಎದುರಾಗಿರುವ ಸಂಕಷ್ಟವನ್ನು ವಿವರಿಸಿದರು. ಶಾಶ್ವತ ಪರಿಹಾರಕ್ಕಾಗಿ ಕಾಡಾನೆಗಳನ್ನು ಶೀಘ್ರ ಸೆರೆಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು.
