
ಸಕಲೇಶಪುರ : ದೇವಲಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇತಿಹಾಸ ಪ್ರಸಿದ್ಧ ಬೆಟ್ಟದ ಭೈರವೇಶ್ವರ ದೇವಾಲಯದ ಪಾವಿತ್ರ್ಯ ಹಾಗೂ ಧಾರ್ಮಿಕ ವಾತಾವರಣಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ದೇವಾಲಯಕ್ಕೆ ಭೇಟಿ ನೀಡಿ ಸ್ಥಳೀಯರು, ಭಕ್ತರು, ತಹಸೀಲ್ದಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರವು ಎಂಟು ಗ್ರಾಮಗಳ ಜನರ ಆರಾಧ್ಯ ದೈವವಾಗಿದ್ದು, ಪ್ರಕೃತಿ ಸೌಂದರ್ಯದ ಮಧ್ಯೆ ನೆಲೆಸಿರುವ ಕಾರಣ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸೋದ್ಯಮವನ್ನು ಸ್ವಾಗತಿಸಿದರೂ, ದೇವಾಲಯದ ಆವರಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ದೇವಾಲಯದ ಆವರಣದಲ್ಲಿ ಜೋರಾಗಿ ಸಂಗೀತ ಹಾಕಿ ನೃತ್ಯ ನಡೆಸಿದ ಘಟನೆ ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ. ದೇವಾಲಯಗಳು ಮನರಂಜನೆಯ ತಾಣಗಳಲ್ಲ; ಭಕ್ತಿ, ಶ್ರದ್ಧೆ ಮತ್ತು ಸಂಸ್ಕೃತಿಯ ಕೇಂದ್ರಗಳಾಗಿವೆ. ಆದ್ದರಿಂದ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಸ್ಥಳೀಯರ ಸಲಹೆ ಆಧರಿಸಿ ದೇವಾಲಯದ ಅಭಿವೃದ್ಧಿಗೆ ಈಗಾಗಲೇ ₹8 ಲಕ್ಷ ಅನುದಾನ ಮೀಸಲಿಡಲಾಗಿದೆ. ಎರಡು-ಮೂರು ದಿನಗಳೊಳಗೆ ಪ್ರವೇಶ ದ್ವಾರ (ಗೇಟ್), ವಾಚ್‌ಮನ್ ಕೊಠಡಿ, ಚೈನ್‌ಲಿಂಕ್ ಮೆಷ್ ಬೇಲಿ, ಶೌಚಾಲಯ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯೂ ಪೂರ್ಣಗೊಂಡಿದ್ದು, ಅಗತ್ಯ ಸೌಲಭ್ಯಗಳನ್ನು ಶೀಘ್ರ ಕಲ್ಪಿಸಲಾಗುವುದು ಎಂದರು.
ದೇವಾಲಯದ ಸುರಕ್ಷತೆಗೆ ಅಗತ್ಯವಾದ ತಡೆಗೋಡೆ (ರಿಟೈನಿಂಗ್ ವಾಲ್) ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಣ್ಣು ಕುಸಿತದ ಅಪಾಯ ಇರುವ ಹಿನ್ನೆಲೆಯಲ್ಲಿ ಈ ಕಾಮಗಾರಿಯನ್ನು ಆದ್ಯತೆಯಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ದೇವಾಲಯದ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ಚಪ್ಪಲಿ ಹೊರಗಡೆ ಬಿಡುವುದು, ದೇವಾಲಯದ ಕಟ್ಟೆಯ ಮೇಲೆ ಏರದಿರುವುದು, ಅಸಭ್ಯ ವರ್ತನೆ ಮಾಡದಿರುವುದು ಸೇರಿದಂತೆ ಪಾಲಿಸಬೇಕಾದ ನಿಯಮಗಳನ್ನು ಸೂಚಿಸುವ ಫಲಕಗಳನ್ನು ಅಳವಡಿಸಲಾಗುವುದು. ಅಗತ್ಯವಿದ್ದರೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ನಿರಂತರ ನಿಗಾ ವಹಿಸಲಾಗುವುದು ಎಂದು ಹೇಳಿದರು.
ದೇವಾಲಯದ ಆಡಳಿತ ಹಾಗೂ ಸಂರಕ್ಷಣೆಗೆ ತಾತ್ಕಾಲಿಕ ಸಮಿತಿ ರಚಿಸುವ ಕುರಿತು ಸ್ಥಳೀಯರು ಮನವಿ ಸಲ್ಲಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿ ಸರ್ಕಾರದ ಮಾರ್ಗಸೂಚಿಗಳಂತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಾಕ್ಸ್ : ಪ್ರವಾಸಿಗರಿಗೆ ಮನವಿ”ಬೆಟ್ಟದ ಭೈರವೇಶ್ವರ ದೇವಾಲಯದ ಪ್ರಕೃತಿ ಸೌಂದರ್ಯವನ್ನು ಎಲ್ಲರೂ ಸವಿಯಲಿ. ಆದರೆ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ಕೃತ್ಯ, ಅಸಭ್ಯ ವರ್ತನೆ, ಜೋರಾಗಿ ಸಂಗೀತ ಹಾಕುವುದು, ನೃತ್ಯ ಮಾಡುವುದು ಅಥವಾ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಚಟುವಟಿಕೆಗಳಿಂದ ದೂರವಿರಬೇಕು. ಹಿಂದೂ ದೇವಾಲಯಗಳು ನಮ್ಮ ಸಂಸ್ಕೃತಿ, ನಂಬಿಕೆ ಮತ್ತು ಪರಂಪರೆಯ ಸಂಕೇತಗಳಾಗಿದ್ದು, ಅವುಗಳ ಗೌರವ ಮತ್ತು ಪಾವಿತ್ರ್ಯ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ” ಎಂದು ಶಾಸಕ ಸಿಮೆಂಟ್ ಮಂಜು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ತಹಸೀಲ್ದಾರ್ ಸುಪ್ರಿತಾ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಗಂಗಾಧರನ್, ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಪಾಟೀಲ್, ವಲಯ ಅರಣ್ಯಧಿಕಾರಿ ಹೇಮಂತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು
