ಸಕಲೇಶಪುರ : ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಹಾನಿಗೊಳಗಾಗಿರುವ ಸರ್ಕಾರಿ ಕಟ್ಟಡಗಳ ಸ್ಥಿತಿಯನ್ನು ಶಾಸಕ ಸಿಮೆಂಟ್ ಮಂಜು ಸೋಮವಾರ ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿರುವುದನ್ನು ಗಮನಿಸಿದ್ದು, ಅದರ ಪುನರ್‌ನಿರ್ಮಾಣಕ್ಕಾಗಿ ಈಗಾಗಲೇ ₹42 ಲಕ್ಷ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.

ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದರು.ತೋಟಗಾರಿಕೆ ಇಲಾಖೆಯ ಹೊಸ ಕಟ್ಟಡದ ಮೇಲ್ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯ ಕಚೇರಿಯನ್ನೂ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಹಲವು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‌ಡಿಪಿಆರ್ ಇಲಾಖೆಗೆ ಶಾಶ್ವತ ಕಟ್ಟಡ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ಹಂತದ ಅನುದಾನವನ್ನು ಸರ್ಕಾರದಿಂದ ಪಡೆದು ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಶಾಲೆಗಳ ದುರಸ್ತಿ ಕುರಿತು ಮಾತನಾಡಿದ ಶಾಸಕರು, ಕೆಲವು ಶಾಲೆಗಳ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಸ್ವಯಂಪ್ರೇರಿತರಾಗಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲು ಮುಂದಾಗಿರುವುದು ಶ್ಲಾಘನೀಯ ಬೆಳವಣಿಗೆ ಎಂದರು.

ಎಸ್‌ಡಿಎಂಸಿ ನಿರ್ಣಯದೊಂದಿಗೆ ಅರ್ಜಿ ಸಲ್ಲಿಸಿದರೆ, ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಅಗತ್ಯ ಅನುಮತಿ ಹಾಗೂ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

“ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ” ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *