
ಹಾಸನ : ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಅಬೂರು ಮಾಚೇಗೌಡನಹಳ್ಳಿ ಗ್ರಾಮದ ಸರ್ವೆ ನಂ. ೯೪ರಲ್ಲಿ ಆಶ್ರಯ ಯೋಜನೆಗೆ ಮೀಸಲಿಟ್ಟಿರುವ ಜಾಗದಲ್ಲಿ ಅಕ್ರಮವಾಗಿ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾಧ್ಯಮದೊಂದಿಗೆ ಮಾತನಾಡಿ, ೧೯೯೧-೯೨ನೇ ಸಾಲಿನಲ್ಲಿ ಗ್ರಾಮದ ಬಡವರು ಹಾಗೂ ದಲಿತ ಕುಟುಂಬಗಳಿಗೆ ಹಕ್ಕುಪತ್ರ ನೀಡಿ ಆಶ್ರಯ ಯೋಜನೆಯಡಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಫಲಾನುಭವಿಗಳು ತಾತ್ಕಾಲಿಕ ಶೆಡ್ ನಿರ್ಮಿಸಿ ವಾಸಿಸುತ್ತಿದ್ದರೂ, ರಾಜಕೀಯ ಪ್ರೇರಿತವಾಗಿ ಆ ಶೆಡ್‌ಗಳನ್ನು ಅಕ್ರಮವಾಗಿ ತೆರವುಗೊಳಿಸಲಾಗಿದೆ ಎಂದು ಆರೋಪಿಸಿದರು.
ಈ ವಿಚಾರವಾಗಿ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗಿದ್ದು, ನಂತರ ಮುಖ್ಯಮಂತ್ರಿಗಳ ಸೂಚನೆಯಂತೆ ಅಂದಿನ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಹಕ್ಕುಪತ್ರವಿಲ್ಲದೆ ಸರ್ಕಾರಿ ಜಾಗದಲ್ಲಿ ನಿರ್ಮಾಣಗೊಂಡಿರುವ ಅನಧಿಕೃತ ಶೆಡ್ ಹಾಗೂ ಮನೆಗಳನ್ನು ತೆರವುಗೊಳಿಸಿ, ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವ ಭರವಸೆ ನೀಡಿದ್ದರು ಎಂದರು.
ಆದರೆ, ನಂತರ ನಡೆದ ಸರ್ವೆ ಕಾರ್ಯದಲ್ಲಿ ಸರ್ಕಾರಿ ಗೋಮಾಳ ಜಾಗದಲ್ಲಿರುವ ಅನಧಿಕೃತ ಮನೆಗಳನ್ನು ತೆರವುಗೊಳಿಸದೆ, ರಾಜಕೀಯ ಒತ್ತಡ ಹಾಗೂ ಹಣದ ಪ್ರಭಾವಕ್ಕೆ ಮಣಿದು ವರದಿ ಸಿದ್ಧಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಸಂಘಟನೆ ಗಂಭೀರ ಆರೋಪ ಮಾಡಿದರು. ಇದಲ್ಲದೆ, ಹಕ್ಕುಬಾಧ್ಯತೆ ಇಲ್ಲದವರು ಆಶ್ರಯ ಯೋಜನೆಗೆ ಮೀಸಲಾದ ಜಾಗದಲ್ಲಿ ಮನೆ ಹಾಗೂ ಶೆಡ್ ನಿರ್ಮಿಸಿಕೊಂಡಿದ್ದರೂ ಅವುಗಳನ್ನು ತೆರವುಗೊಳಿಸದೇ, ವಿವಾದಿತ ಜಾಗದಲ್ಲೇ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಅರಕಲಗೂಡು ತಹಸೀಲ್ದಾರ್ ಹಾಗೂ ಶಾಸಕ ಎ. ಮಂಜು ಸರ್ಕಾರಿ ರಜೆ ದಿನದಂದು ಗುದ್ದಲಿ ಪೂಜೆ ನೆರವೇರಿಸಿರುವುದು ಕಾನೂನುಬಾಹಿರ ಕ್ರಮ ಎಂದು ದೂರಲಾಗಿದೆ.
ಹೀಗಾಗಿ ಸರ್ವೆ ನಂ. ೯೪ರ ಜಮೀನಿನ ಮರುಸರ್ವೆ ನಡೆಸಿ, ಅನಧಿಕೃತ ಕಟ್ಟಡಗಳನ್ನು ಗುರುತಿಸಿ ತೆರವುಗೊಳಿಸಬೇಕು. ಕರ್ತವ್ಯಲೋಪ ಎಸಗಿರುವ ತಹಸೀಲ್ದಾರ್, ಸರ್ವೇಯರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹಾಗೂ ಸರ್ಕಾರಿ ಭೂಮಿ ಅತಿಕ್ರಮಿಸಿರುವವರ ವಿರುದ್ಧ ಭೂಕಬಳಿಕೆ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಿ, ಹಕ್ಕುಪತ್ರ ಹೊಂದಿರುವ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘಟನೆ ಮತ್ತು ಹಸಿರು ಸೇನೆ ಜಿಲ್ಲಾ ಪದಾಧಿಕಾರಿಗಳ ಪರವಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ರಾಮಚಂದ್ರ, ರಮೇಶ್, ಕಾಳಮ್ಮ, ಗೌರಮ್ಮ, ಜಯಲಕ್ಷ್ಮಿ, ಸಾಕಮ್ಮ, ಲಕ್ಷ್ಮೀಶ್, ಶಂಕರೇಗೌಡ, ಸೋಮಶೇಖರ್, ಅಬ್ದೂಲ್ ಇತರರು ಉಪಸ್ಥಿತರಿದ್ದರು.
