
ಬೇಲೂರು : ಪರಿಸರ ಸಂರಕ್ಷಣೆ ಇಂದಿನ ಕಾಲದ ಅತ್ಯಂತ ಪ್ರಮುಖ ಅಗತ್ಯವಾಗಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು. ನಗರದ ಗೆಂಡೆಹಳ್ಳಿ ರಸ್ತೆಯ ಹನುಮಂತನಗರದಲ್ಲಿರುವ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ತಮ್ಮ ಹುಟ್ಟುಹಬ್ಬದ ಅಂಗವಾಗಿ ನೂರಾರು ಸಸಿಗಳನ್ನು ನೆಡುವ ಮೂಲಕ ಅವರು ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ದಿವಂಗತ ಚೆನ್ನಮ್ಮ ಅವರ ಸ್ಮರಣಾರ್ಥ ಒಂದು ಗಿಡ ನೆಟ್ಟು ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು ಪ್ರಕೃತಿಯ ಅಸಮತೋಲನದಿಂದ ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಅನೇಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆಷಾಢ ಮಾಸದಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ಪರಿಸರದ ಮೇಲಿನ ಮಾನವನ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.ಯುವಜನತೆ ಹುಟ್ಟುಹಬ್ಬವನ್ನು ಕೇವಲ ಕೇಕ್ ಕತ್ತರಿಸಿ ಸಂಭ್ರಮಿಸುವುದಕ್ಕೆ ಸೀಮಿತಗೊಳಿಸದೆ, ಸಸಿ ನೆಡುವುದು, ರಕ್ತದಾನ, ಬಡವರಿಗೆ ನೆರವು ನೀಡುವುದು ಸೇರಿದಂತೆ ಸಮಾಜಮುಖಿ ಕಾರ್ಯಗಳ ಮೂಲಕ ಆಚರಿಸಿದರೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದು ಕರೆ ನೀಡಿದರು.
ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರು ಪ್ಲಾಸ್ಟಿಕ್ ತ್ಯಜಿಸಿ ಸ್ವಚ್ಛತೆ ಕಾಪಾಡಬೇಕು. ಕಾಡು ನಾಶವಾಗುತ್ತಿರುವ ಪರಿಣಾಮ ಮಾನವ-ಪ್ರಾಣಿ ಸಂಘರ್ಷ ಹೆಚ್ಚುತ್ತಿದ್ದು, ಪರಿಸರ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಸೇವೆಯನ್ನು ಸ್ಮರಿಸಿದ ಅವರು, ಜೀವನದ ಕೊನೆಯ ದಿನಗಳನ್ನು ಬೇಲೂರಿನಲ್ಲಿ ಕಳೆದ ತಿಮ್ಮಕ್ಕ ಅವರಿಗೆ ಸೂಕ್ತ ಗೌರವ ದೊರಕಿಲ್ಲ ಎಂಬುದು ವಿಷಾದನೀಯ. ಮುಂದಿನ ದಿನಗಳಲ್ಲಿ ಅವರ ಹೆಸರಿನಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ, ಬೇಲೂರಿನಲ್ಲಿ ಅವರ ಪ್ರತಿಮೆ ಸ್ಥಾಪನೆ ಹಾಗೂ ಪ್ರಮುಖ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡುವಂತೆ ಪುರಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಮಾತನಾಡಿ, ತೀರ್ಥಕುಮಾರಿ ವೆಂಕಟೇಶ್ ಅವರು ಹಲವು ವರ್ಷಗಳಿಂದ ನಗರದ ವಿವಿಧ ಭಾಗಗಳಲ್ಲಿ ಸಾವಿರಾರು ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅವರ ಪುತ್ರಿ ರೇವತಿಪ್ರಿಯಾ ಕೂಡ ಪರಿಸರ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಸಾಲುಮರದ ತಿಮ್ಮಕ್ಕ ಅವರ ದತ್ತುಪುತ್ರ ಬಳ್ಳೂರು ಉಮೇಶ್ ಮಾತನಾಡಿ, ತಿಮ್ಮಕ್ಕ ಅವರು ನೆಟ್ಟ ಮರಗಳು ಇಂದು ಹೆಮ್ಮರಗಳಾಗಿ ಬೆಳೆದಿರುವುದು ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ತೀರ್ಥಕುಮಾರಿ ವೆಂಕಟೇಶ್ ಅವರ ಕುಟುಂಬವೂ ಪರಿಸರ ಸಂರಕ್ಷಣೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಹಸಿರು ಭಾರತ ನಿರ್ಮಾಣದ ಅವರ ಸಂಕಲ್ಪ ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಮೀನಾಕ್ಷಿ ವೆಂಕಟೇಶ್, ಜಮೀಲ ತೌಫಿಕ್, ಪ್ರಭಾಕರ್, ಶ್ರೀಲಕ್ಷ್ಮಿ, ಮಂಗಳವಾದ್ಯ ಮತ್ತು ಸಂಗೀತ ಕಲಾ ಕ್ಷೇತ್ರದ ಅಧ್ಯಕ್ಷ ನರಸಿಂಹಮೂರ್ತಿ, ಶಿಕ್ಷಕರಾದ ಸಂಪತ್ ಉಪನ್ಯಾಸಕ ಮಹೇಶ್, ಮಾನವ ಹಕ್ಕು ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ಜಿ. ನಿಂಗರಾಜ್, ಎಚ್.ಆರ್.ಎ. ಖಾನ್, ಸಾಮಿಲ್ ಮಾಲಿಕ್ ಅಕ್ರಂ, ರೇವತಿಪ್ರಿಯಾ ಸೇರಿದಂತೆ ಅನೇಕ ಗಣ್ಯರು, ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
