
ಸಕಲೇಶಪುರ, ಜು. 27: ರಾಷ್ಟ್ರೀಯ ಹೆದ್ದಾರಿಯ ಕಣದಳ್ಳಿ ಸಮೀಪ ಶ್ರೀವರಿ ಟ್ರಾನ್ಸ್‌ಪೋರ್ಟ್ ಕಂಪನಿಯ ಸುಮಾರು 30ಕ್ಕೂ ಹೆಚ್ಚು ಲಾರಿಗಳು ಪಕ್ಕದ ಸೈಟ್‌ಗೆ ಸಂಚರಿಸುವ ವೇಳೆ ರಸ್ತೆಯ ಮೇಲೆ ಮಣ್ಣು ಚೆಲ್ಲುತ್ತಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.ರಸ್ತೆಯ ಮೇಲೆ ಹರಡಿರುವ ಮಣ್ಣಿನ ಕಾರಣ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಜಾರಿಬೀಳುವ ಘಟನೆಗಳು ಪದೇಪದೇ ನಡೆಯುತ್ತಿದ್ದು, ಪ್ರತಿದಿನ ಒಂದಲ್ಲೊಂದು ಅಪಘಾತ ಸಂಭವಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಶಾಲಾ ಮಕ್ಕಳು, ಗ್ರಾಮಸ್ಥರು, ಹಾಲು ಸಾಗಿಸುವವರು ಸೇರಿದಂತೆ ನಿತ್ಯ ಪ್ರಯಾಣಿಕರು ಜೀವಭಯದಲ್ಲೇ ಓಡಾಡುವಂತಾಗಿದೆ.ಈ ಕುರಿತು ತಿಳಿಯ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್‌ಗಳ ಗಮನಕ್ಕೂ ಹಲವು ಬಾರಿ ತಂದಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೂಡಲೇ ರಸ್ತೆಯ ಮೇಲಿರುವ ಮಣ್ಣನ್ನು ತೆರವುಗೊಳಿಸಿ, ಲಾರಿಗಳಿಂದ ಮಣ್ಣು ರಸ್ತೆಗೆ ಬೀಳದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸಂಬಂಧಪಟ್ಟ ಟ್ರಾನ್ಸ್‌ಪೋರ್ಟ್ ಕಂಪನಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅಧಿಕಾರಿಗಳು ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
