ಚಿಕ್ಕಮತಿಘಟ್ಟ :ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯ ಕೃಷಿ ಮಹಾವಿದ್ಯಾಲಯ, ಕಾರೆಕೆರೆ, ಹಾಸನದ 7ನೇ ಸೆಮಿಸ್ಟರ್ ಬಿ.ಎಸ್‌.ಸಿ. (ಕೃಷಿ) ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ (RAWEP) ಅಂಗವಾಗಿ ಆಧುನಿಕ ಕೃಷಿ ಯಾಂತ್ರೀಕರಣ ಮತ್ತು ನಿಖರ ಕೃಷಿ ತಂತ್ರಜ್ಞಾನಗಳ ಕುರಿತು ವಿಶೇಷ ಕ್ಷೇತ್ರ ಭೇಟಿ ನಡೆಸಿದರು.

ಈ ಸಂದರ್ಭದಲ್ಲಿ ಗ್ರೋಮೋರ್ (Gromor) ಕಂಪನಿ ವತಿಯಿಂದ ಶುಂಠಿ ಬೆಳೆ ಹೊಲದಲ್ಲಿ ಕೃಷಿ ಡ್ರೋನ್ ಮೂಲಕ ಬೆಳೆ ಸಂರಕ್ಷಣಾ ಔಷಧ ಸಿಂಪಡಣೆಯ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಯಿತು. ಡ್ರೋನ್ ಬಳಕೆಯಿಂದ ಕಡಿಮೆ ಸಮಯದಲ್ಲಿ ಸಮರ್ಪಕ ಪ್ರಮಾಣದಲ್ಲಿ ಔಷಧ ಸಿಂಪಡಣೆ, ಕಾರ್ಮಿಕ ವೆಚ್ಚದ ಉಳಿತಾಯ, ರಾಸಾಯನಿಕಗಳ ನೇರ ಸಂಪರ್ಕದಿಂದ ರೈತರ ಆರೋಗ್ಯ ರಕ್ಷಣೆ ಹಾಗೂ ನಿಖರ ಕೃಷಿಯ ಮಹತ್ವದ ಬಗ್ಗೆ ತಜ್ಞರು ವಿದ್ಯಾರ್ಥಿಗಳಿಗೆ ವಿವರಿಸಿದರು.

ಡ್ರೋನ್ ಕಾರ್ಯವಿಧಾನ, ಸುರಕ್ಷತಾ ಕ್ರಮಗಳು ಹಾಗೂ ಆಧುನಿಕ ಕೃಷಿಯಲ್ಲಿ ಅದರ ಉಪಯೋಗಗಳ ಕುರಿತು ವಿದ್ಯಾರ್ಥಿಗಳು ಪ್ರಾಯೋಗಿಕ ಮಾಹಿತಿಯನ್ನು ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಹೇಮಾವತಿ ಸಕ್ಕರೆ ಕಾರ್ಖಾನೆ ವತಿಯಿಂದ ಯಾಂತ್ರಿಕ ಕಬ್ಬು ಕೊಯ್ಲು ಯಂತ್ರದ (Mechanical Sugarcane Harvester) ಪ್ರಾತ್ಯಕ್ಷಿಕೆ ನಡೆಯಿತು. ಈ ಯಂತ್ರವು ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಕಬ್ಬನ್ನು ಕೊಯ್ಲು ಮಾಡುವ ವಿಧಾನವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.

ಕಾರ್ಮಿಕರ ಕೊರತೆಯ ಸಂದರ್ಭದಲ್ಲಿ ಯಾಂತ್ರೀಕೃತ ಕೊಯ್ಲಿನ ಅಗತ್ಯತೆ, ಸಮಯ ಮತ್ತು ವೆಚ್ಚದ ಉಳಿತಾಯ, ಯಂತ್ರದ ಕಾರ್ಯವಿಧಾನ ಹಾಗೂ ರೈತರಿಗೆ ದೊರೆಯುವ ಪ್ರಯೋಜನಗಳ ಕುರಿತು ತಜ್ಞರು ವಿವರಿಸಿದರು.

ಈ ಕ್ಷೇತ್ರ ಭೇಟಿಯು ವಿದ್ಯಾರ್ಥಿಗಳಿಗೆ ಆಧುನಿಕ ಕೃಷಿ ಯಾಂತ್ರೀಕರಣ, ನಿಖರ ಕೃಷಿ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಬಗ್ಗೆ ಪ್ರಾಯೋಗಿಕ ಅನುಭವವನ್ನು ನೀಡಿತು.

ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನವನ್ನು ಕ್ಷೇತ್ರಮಟ್ಟದ ಅನುಭವದೊಂದಿಗೆ ಸಂಯೋಜಿಸಿ, ಭವಿಷ್ಯದಲ್ಲಿ ರೈತರಿಗೆ ನವೀನ ಕೃಷಿ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಸಾಮರ್ಥ್ಯವನ್ನು ವೃದ್ಧಿಸುತ್ತವೆ.ಈ ತಂತ್ರಜ್ಞಾನವನ್ನು ರೈತರಿಗೆ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳು ಮನವೊಲಿಸುವುದಾಗಿ ತಿಳಿಸಿದರು,

ಹಾಗು ಅಧಿಕಾರಿಗಳನ್ನು ತಮ್ಮ ಗ್ರಾಮಕ್ಕೆ ಕರೆದು ಈ ರೀತಿಯ ಆಧುನಿಕ ತಂತ್ರಜ್ಞಾನಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಮನವಿ ಮಾಡಿಕೊಂಡರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *