
ಸಕಲೇಶಪುರ: ತಾಲೂಕಿನ ದೇವಲಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಣಾಲ್ ಗ್ರಾಮದಲ್ಲಿ ಕಾಡಾನೆಯೊಂದು ಕರೆಂಟ್ ಕಂಬವನ್ನು ಉರುಳಿಸಿರುವ ಘಟನೆ ಸಂಭವಿಸಿದ್ದು, ಇದೇ ಆನೆ ಗುಡ್ಡಗಂಡಿ ಪ್ರದೇಶದಲ್ಲಿ ರಸ್ತೆ ಮಧ್ಯೆ ಮರವನ್ನು ಉರುಳಿಸಿ ಸಂಚಾರಕ್ಕೂ ಅಡ್ಡಿಪಡಿಸಿದೆ.
ಕಳೆದ ಸುಮಾರು ಒಂದು ತಿಂಗಳಿಂದ ಈ ಕಾಡಾನೆ ಬಣಾಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕಾಫಿ ತೋಟಗಳು ಹಾಗೂ ಕೃಷಿ ಬೆಳೆಗಳಿಗೆ ನಿರಂತರ ಹಾನಿ ಉಂಟುಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ದಿನದಿಂದ ದಿನಕ್ಕೆ ಆನೆಯ ಹಾವಳಿ ಹೆಚ್ಚುತ್ತಿದ್ದು, ಗ್ರಾಮಸ್ಥರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.ಆದರೂ ಈವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಡಾನೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಓಡಿಸುವುದು, ನಿರಂತರ ನಿಗಾ ವಹಿಸುವುದು ಹಾಗೂ ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಕಾಡಾನೆ ಗ್ರಾಮಗಳ ಸಮೀಪವೇ ನಿರಂತರವಾಗಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮಾನವ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ಆರ್‌ಎಫ್‌ಒ ಹೇಮಂತ್ ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.




